ಬೆಂಗಳೂರು: ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ, ಗುತ್ತಿಗೆ ವೈದ್ಯರಿಗೆ ನೇರ ನೇಮಕಾತಿ ವೇಳೆ ಕೃಪಾಂಕ ನೀಡುವಂತೆ, ವೈದ್ಯಾಧಿಕಾರಿಗಳಿಗೆ ಆಡಳಿತಾತ್ಮಕ ಹುದ್ದೆಗಳನ್ನು ನೀಡುವ ಸಂದರ್ಭದಲ್ಲಿ ಕೆಲ ಮಾನದಂಡಗಳನ್ನು ಅಳವಡಿಸುವಂತೆ ಪತ್ರದಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಈ ಕುರಿತಂತೆ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರವೀಂದ್ರನಾಥ್ ಎಂ ಮೇಟಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ವೈದ್ಯಾಧಿಕಾರಿಗಳಿಗೆ ಆಡಳಿತಾತ್ಮಕ ಹುದ್ದೆಗಳನ್ನು ನೀಡುವ ಸಂದರ್ಭದಲ್ಲಿ ಈ ಕೆಳಕಂಡ ಮಾನದಂಡಗಳನ್ನು ಅಳವಡಿಸುವಂತೆ ಮನವಿ
1. ಸ್ನಾತಕೋತ್ತರ ವ್ಯಾಸಂಗದ ಅವಧಿಯಲ್ಲಿ ನೀಡಿದ ಬಾಂಡ್ ಅವಧಿಯನ್ನು ಮುಂದಿನ ದಿನಗಳಲ್ಲಿ (Prospective) ಪರಿಗಣಿಸುವುದು.
2. ಯಾವುದೇ ಸೇವಾನಿರತ ಸ್ನಾತಕೋತ್ತರ ವ್ಯಾಸಂಗ ಮುಗಿಸಿ ಕನಿಷ್ಟ 10 ವರ್ಷ ಕಾರ್ಯನಿರ್ವಹಿಸಿದ ಹಾಗೂ ಜೇಷ್ಠತೆಯ ಆಧಾರದ ಮೇಲೆ ಜಿಲ್ಲಾ ಶಸ್ತ್ರಚಿಕಿತ್ಸಕರು/ಮೇಲ್ದರ್ಜೆಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಹುದ್ದೆಗಳಿಗೆ ಪರಿಗಣಿಸುವುದು.
3. ಆಡಳಿತಾತ್ಮಕ ಹುದ್ದೆಗಳಿಗೆ ತಾವೇ ನಿಗಧಿಪಡಿಸಿದ ಮಾನದಂಡದಂತೆ 3 ವರ್ಷ/4 ವರ್ಷ ಅವಧಿ ಪೂರ್ಣಗೊಳ್ಳದ ವೈದ್ಯಾಧಿಕಾರಿಗಳನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸುವುದು.
4. ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ (ಆರ್‌ಸಿಎಚ್‌ಒ/ಡಿಎಲ್‌ಒ/ಎಫ್ ಡಬ್ಲ್ಯೂ ಬ/ ಒ/ಡಿಟಿಒ/ಡಿಎಸ್‌ಒ) ಆಡಳಿತಾತ್ಮಕ ಹುದ್ದೆಗಳಲ್ಲಿ 3 ವರ್ಷ ಪೂರ್ಣಗೊಳ್ಳದ ವೈದ್ಯಾಧಿಕಾರಿಗಳನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸುವುದು. 5. ವೈದ್ಯರಾಗಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಿದ ಅವಧಿಯನ್ನು ಆಡಳಿತಾತ್ಮಕ ಹುದ್ದೆಗಳಿಗೆ ಪರಿಗಣಿಸುವುದು.
6. 2025-26 ನೇ ಸಾಲಿನಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ವೈದ್ಯಾಧಿಕಾರಿಗಳು/ತಜ್ಞರನ್ನು ಸೇವಾ ಹಿರಿತನ ಆಧಾರದ ಮೇಲೆ ಆಡಳಿತಾತ್ಮಕ ಹುದ್ದೆಗಳಿಗೆ ಪರಿಗಣಿಸುವುದು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳಿಗೆ ಆಡಳಿತಾತ್ಮಕ ಹುದ್ದೆಗಳನ್ನು ನೀಡುವ ಸಂದರ್ಭದಲ್ಲಿ ಈ ಮೇಲ್ಕಂಡ ಅಂಶಗಳನ್ನು ಪರಿಗಣಿಸಲು ಹಲವಾರು ಬಾರಿ ಮನವಿಯನ್ನು ಸಲ್ಲಿಸಲಾಗಿದ್ದರೂ ಸಹ, ಸೇವಾ ಹಿರಿತನವನ್ನು ಮಾತ್ರ ಪರಿಗಣಿಸಿ, ಮೇಲ್ಕಂಡಂತೆ ತಿಳಿಸಿದ ಯಾವುದೇ ಅಂಶಗಳನ್ನು ಪರಿಗಣಿಸದೇ ಏಕಪಕ್ಷೀಯವಾಗಿ ನಿರ್ಧಾರವನ್ನು ಕೈಗೊಂಡು ಆದೇಶ ನೀಡಿರುತ್ತೀರಿ.
ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ವೈದ್ಯರ ಸುಧಾರಣೆಯು ಅವಶ್ಯಕವಾಗಿದೆ. ಆದರೆ ಈ ಸುಧಾರಣೆ ಪ್ರತಿ ವೈದ್ಯರ ಹಿತಾಸಕ್ತಿಯನ್ನು ಕಾಪಾಡುವ ರೀತಿಯಲ್ಲಿರಬೇಕು, ಅದರ ಬದಲಾಗಿ ಏಕಪಕ್ಷೀಯ ನಿರ್ಧಾರವಾಗಬಾರದು. ಆದ್ದರಿಂದ ಈ ಮೇಲ್ಕಂಡ ಅಂಶಗಳನ್ನು ಪರಿಗಣಿಸುವಂತೆ ಪುನ: ಮನವಿ ಮಾಡುತ್ತಾ, ಪರಿಗಣಿಸದಿದ್ದ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಹಾಗೂ ಇಲಾಖೆಯ ಹಿತವನ್ನು ಮನಗಂಡು, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹೋರಾಟದ ಹಾದಿ ಹಿಡಿಯುವ ಅನಿವಾರ್ಯತೆ ಒದಗುತ್ತದೆ ಎಂಬುದಾಗಿ ಎಚ್ಚರಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇರ ನೇಮಕಾತಿ ಪ್ರಕ್ರಿಯೆ ಗುತ್ತಿಗೆ ವೈದ್ಯರಿಗೆ ಕೃಪಾಂಕ ನೀಡುವಂತೆ ಮನವಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಸದರಿ ಅಂಶವನ್ನು ಮನಗಂಡ ಘನ ಸರ್ಕಾರವು ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡಿರುವುದಕ್ಕೆ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಅಭಿನಂದನೆಯನ್ನು ಸಲ್ಲಿಸುತ್ತದೆ.
ಮುಂದುವರೆದು, ಇಲಾಖೆಯ ನಿರ್ದೇಶನದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರುಗಳು ನೇಮಕಾತಿಗೊಂಡಿರುತ್ತಾರೆ. ನೇಮಕಾತಿಯನ್ವಯ ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರುಗಳು ಸೇವಾ ಅನುಭವವನ್ನು ಹೊಂದಿರುತ್ತಾರೆ. ಈ ಹಿಂದೆ ನೇರ ನೇಮಕಾತಿಯ ಸಂದರ್ಭದಲ್ಲಿ ಸಂಖ್ಯೆ SRC/68/2019-20, ದಿನಾಂಕ 10.09.2020 ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರುಗಳಿಗೆ ಪ್ರತಿ 6 ತಿಂಗಳಿಗೆ 2.5 ಅಂಕಗಳಂತ ಕೃಪಾಂಕವನ್ನು ನೀಡಲಾಗಿತ್ತು.
ಸದರಿ ಆದೇಶದಂತೆ ಪ್ರಸ್ತುತ ನಡೆಸುತ್ತಿರುವ ನೇಮಕಾತಿಯಲ್ಲಿಯೂ ಗುತ್ತಿಗೆ ವೈದ್ಯರುಗಳಿಗೆ ಪ್ರತಿ 6 ತಿಂಗಳಿಗೆ 2.5 ಅಂಕಗಳಂತ ಕೃಪಾಂಕವನ್ನು ನೀಡುವಂತೆ ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ.
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನ್ಯಾಯಯುತ ಬೇಡಿಕೆಗಳು ಈಡೇರದಿರುವಂತೆ ಒತ್ತಾಯ
ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ವೈದ್ಯರ ಸುಧಾರಣೆಯು ಅವಶ್ಯಕವಾಗಿದೆ. ಆದರೆ ಈ ಸುಧಾರಣೆ ಪ್ರತಿ ವೈದ್ಯರ ಹಿತಾಸಕ್ತಿಯನ್ನು ಕಾಪಾಡುವ ರೀತಿಯಲ್ಲಿರಬೇಕು, ಅದರ ಬದಲಾಗಿ ಏಕಪಕ್ಷೀಯ ನಿರ್ಧಾರವಾಗಬಾರದು.
ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿ, ಸರ್ಕಾರಿ ವೈದ್ಯಾಧಿಕಾರಿಗಳ ನ್ಯಾಯಸಮ್ಮತ ಹಕ್ಕುಗಳು ಮತ್ತು ಇಲಾಖೆಯ ಸಮಗ್ರ ಹಿತಾಸಕ್ತಿಯನ್ನು ಮನಗಂಡು, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಕೆಳಕಂಡ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಮನವಿ ಮಾಡಿರುತ್ತದೆ:
1. ಸೇವಾ ಹಿರಿತನದ ಆಧಾರದ ಮೇಲೆ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸುವುದು
2. ವೃಂದ ಮತ್ತು ನೇಮಕಾತಿ ನಿಯಮ (C&R) ತಿದ್ದುಪಡಿ ಆದೇಶವನ್ನು ಪ್ರಕಟಿಸುವುದು
3. ಜಂಟಿ ನಿರ್ದೇಶಕರು ಮತ್ತು ಅಪರ ನಿರ್ದೇಶಕರ ಹುದ್ದೆಗಳಿಗೆ ಶೀಘ್ರ ಪದೋನ್ನತಿಯನ್ನು ನೀಡುವುದು.
ಆದರೆ, ಸರ್ಕಾರ ಈ ಬೇಡಿಕೆಗಳನ್ನು ಈವರೆಗೆ ಈಡೇರಿಸದೆ, ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದೆ. ಇದರ ಪರಿಣಾಮವಾಗಿ ವೈದ್ಯಾಧಿಕಾರಿಗಳ ಮನೋಸ್ಥೆರ್ಯ ದಿನೇ ದಿನೇ ಕುಗ್ಗುತ್ತಿದೆ. ಹೀಗಾಗಿ, ಈ ನ್ಯಾಯಸಮ್ಮತ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಲು ಸರ್ಕಾರವನ್ನು ಒತ್ತಾಯಪೂರ್ವಕವಾಗಿ ವಿನಂತಿಸುತ್ತೇವೆ. ಬೇಡಿಕೆಗಳು ಈಡೇರದಿದ್ದಲ್ಲಿ, ಸಾರ್ವಜನಿಕ ಆರೋಗ್ಯ ಹಾಗೂ ಇಲಾಖೆಯ ಹಿತವನ್ನು ಮನಗಂಡು, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹೋರಾಟದ ಹಾದಿ ಹಿಡುಯುವ ಅನಿವಾರ್ಯತೆ ಒದಗುತ್ತದೆ ಎಂಬುದಾಗಿ ಎಚ್ಚರಿಸಲಾಗಿದೆ.
ಧರ್ಮಸ್ಥಳದ ವಿರುದ್ಧ ಅವಹೇನಕಾರಿ ಹೇಳಿಕೆ: ಆರೋಪಿಗೆ 15 ದಿನ ಸೆರೆವಾಸದ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ