ಬೆಂಗಳೂರು : 1 ಮಿಲಿಯನ್ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯಿಂದ 2021 ನೇ ಸಾಲಿನಲ್ಲಿ ಘೋಷಿಸಲಾಗಿದ್ದ ಸೆಮಿಕಾನ್ ಇಂಡಿಯಾ ಯೋಜನೆ ಉದ್ದೇಶಿತ ಗುರಿಯನ್ನು ತಲುಪುವಲ್ಲಿ ವಿಫಲವಾಗಿರುವುದು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ ಜಿತಿನ್ ಪ್ರಸಾದ್ ಲೋಕಸಭೆಗೆ ನೀಡಿದ ತಮ್ಮ ಲಿಖಿತ ಉತ್ತರ ಮೂಲಕ ಸ್ಪಷ್ಟವಾಗಿದೆ, ಸೆಮಿಕಾನ್ ಇಂಡಿಯಾ ಯೋಜನೆಯ ಅನುಷ್ಠಾನದಲ್ಲಿ ಅಗಿರುವ ಲೋಪಗಳು ಕ್ವಾಂಟಮ್ ಮಿಷನ್‌ನಲ್ಲಿ ಮರುಕಳಿಸದೇ ಇರುವಂತೆ ಎಚ್ಚರವಹಿಸುವುದು ಬಹಳ ಅಗತ್ಯವಾಗಿದೆ ಎಂದು ರಾಯಚೂರು ಸಂಸದರಾದ ಜಿ ಕುಮಾರ ನಾಯಕ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಸೆಮಿಕಾನ್ ಇಂಡಿಯಾ ಯೋಜನೆಯ ಮೂಲಕ 27 ಸಾವಿರಕ್ಕೂ ಹೆಚ್ಚು ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಸರ್ಕಾರ ತಮ್ಮ ಉತ್ತರದಲ್ಲಿ ಹೇಳಿಕೊಂಡಿದೆ. ಆದರೆ, 2021 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ ಸಂಧರ್ಭದಲ್ಲಿ 1 ಮಿಲಿಯನ್ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು. ಈಗ ತಮ್ಮ ಉತ್ತರದಲ್ಲಿ ನಮೂದಿಸಿರುವ ಉದ್ಯೋಗಾವಕಾಶಗಳ ಸಂಖ್ಯೆಯನ್ನು ನೋಡಿದಾಗ, ಯೋಜನೆ ಘೋಷಣೆಗಷ್ಟೇ ಸೀಮಿತವಾಗಿರುವುದು ಸ್ಪಷ್ಟವಾಗುತ್ತಿದೆ.
ಭಾರತ ದೇಶದ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಷಿಸಬೇಕಾಗಿದ್ದ ಸೆಮಿಕಂಡಕ್ಟರ್ ಕ್ಷೇತ್ರವು ಗ್ರೌಂಡ್ ಲೆವೆಲ್‌ನಲ್ಲಿ ಯಾವುದೇ ಪ್ರಗತಿ ಕಾಣದೇ ಸೊರಗಿದೆ. ಕೇವಲ ಘೋಷಣೆಗಳೇ ರಾರಾಜಿಸುತ್ತಿದೆಯೋ ಹೊರತು, ದೇಶದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆ ವಿಳಂಬವಾಗುತ್ತಿದೆ. ಆಡಳಿತಾತ್ಮಕ ಅನುಮೋದನೆಯಲ್ಲಿ ಆಗುತ್ತಿರುವ ವಿಳಂಬತೆ ಇದಕ್ಕೆ ಕಾರಣ ಎನ್ನುವುದು ಹೂಡಿಕೆದಾರರ ಅಭಿಪ್ರಾಯವಾಗಿದೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ದೇಶ ಹಿಂದೆ ಬೀಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM) ನಲ್ಲಿ ಸೆಮಿಕಂಡಕ್ಟರ್ ವಲಯದಲ್ಲಾದ ತಪ್ಪುಗಳು ಪುನರಾವರ್ತನೆಯಾಗಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ.
ಕೇಂದ್ರ ಸರ್ಕಾರದಿಂದ ನಿಯಂತ್ರಿತವಾಗುವಂತಹ ವಿಧಾನಗಳು, ವಾಸ್ತವಿಕವಲ್ಲದ ಟೈಮ್‌ಲೈನ್ ಹಾಗೂ ಅಗತ್ಯ ಕೌಶಲ್ಯದ ಕೊರತೆ ಸೆಮಿಕಂಡಕ್ಟರ್ ವಲಯದ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಕ್ವಾಂಟಮ್ ಮಿಷನ್‌ನಲ್ಲಿ ರಾಜ್ಯ ಆಧಾರಿತ ನವೀನ ವ್ಯವಸ್ಥೆಗಳಿಗೆ ಕೇಂದ್ರ ಅನುವು ಮಾಡಿಕೊಡಬೇಕು. ಈಗಾಗಲೇ ಕರ್ನಾಟಕ ರಾಜ್ಯದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯವನ್ನು ಕ್ವಾಂಟಮ್ ಜಾಗತಿಕ ಶಕ್ತಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ/ಬಿಟಿ, ಉನ್ನತ ಶಿಕ್ಷಣ ಮತ್ತು ಕೈಗಾರಿಕಾ ಇಲಾಖೆಗಳ ನಡುವಿನ ಸಂಬಂಧವನ್ನು ಬಲಪಡಿಸಲಾಗಿದ್ದು, ಸಚಿವ ಎನ್.ಎಸ್.ಬೋಸರಾಜು, ಪ್ರಿಯಾಂಕ್ ಖರ್ಗೆ, ಎಂ.ಸಿ.ಸುಧಾಕರ್ ಮತ್ತು ಎಂ.ಬಿ.ಪಾಟೀಲ್ ಅವರ ದೂರದೃಷ್ಟಿ ನಾಯಕತ್ವದಲ್ಲಿ ಕರ್ನಾಟಕವು ಭಾರತದ ಕ್ವಾಂಟಮ್ ಭವಿಷ್ಯವನ್ನು ಬಲಪಡಿಸಲಿದೆ.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಆಗಿರುವ ಕಹಿ ಅನುಭವಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕ್ವಾಂಟಮ್ ಕ್ರಾಂತಿಗೆ ಸಿದ್ದವಾಗಿದೆ. ಇದಕ್ಕೆ ಕರ್ನಾಟಕವು ಒಂದು ಉತ್ತಮ ದಿಷೆಯನ್ನು ತೋರಿಸುತ್ತಿದೆ. ಈಗ ಕೇಂದ್ರ ಸರ್ಕಾರವು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಆದ ತಪ್ಪುಗಳನ್ನು ಮರುಕಳಿಸದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು, ಒಕ್ಕೂಟ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಂಡು, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮುಂದುವರೆಯುವಂತೆ ಕೇಂದ್ರ ಸರ್ಕಾರಕ್ಕೆ ಸಂಸದರಾದ ಜಿ. ಕುಮಾರ ನಾಯಕ ಆಗ್ರಹಿಸಿದ್ದಾರೆ.
WATCH VIDEO: ಭೀಮನ ಅಮಾವಾಸ್ಯೆಯ ಪ್ರಯುಕ್ತ ಸಿಂಗದೂರು ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ: ಹರಿದು ಬಂದ ಭಕ್ತಸಾಗರ
BREAKING: ಸ್ಥಳೀಯರೇ ಆತಂಕ ಬೇಡ, ಹೊರ ರಾಜ್ಯದ ದನಕರು ಅರಣ್ಯದಲ್ಲಿ ಮೇಯಿಸಲು ನಿಷೇಧ: ಸಚಿವ ಈಶ್ವರ್ ಖಂಡ್ರೆ