ಬೆಂಗಳೂರು: “ಸಾವಿರ ಜನ ವಿರೋಧ ಮಾಡಲಿ, ನನ್ನ ನಂಬಿಕೆ ನನಗೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಆಯೋಜಿಸಿರುವ ಪುಸ್ತಕ ಮೇಳ ಉದ್ಘಾಟನಾ ಕಾರ್ಯಕ್ರಮದ ನಂತರ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.
ಕುಂಭಮೇಳ ಹಾಗೂ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿಮ್ಮ ನಿಲುವಿನ ಬಗ್ಗೆ ಚರ್ಚೆಯಾಗುತ್ತಿದೆಯಲ್ಲಾ ಎಂದು ಕೇಳಿದಾಗ, “ನಾನು ನೊಣವಿನಕೆರೆ ಮಠಕ್ಕೆ ಹೋಗುತ್ತೇನೆ. ಅದಕ್ಕೆ ನಮ್ಮವರು, ‘ನೀವು ನಮ್ಮ ಮಠಕ್ಕೆ ಬರುವುದಿಲ್ಲ, ಅಲ್ಲಿಗೆ ಹೋಗುತ್ತೀರಲ್ಲಾ’ ಎಂದು ಕೇಳುತ್ತಾರೆ. ನನ್ನ ನಂಬಿಕೆ ಇದ್ದ ಕಡೆ ನಾನು ಹೋಗುತ್ತೇನೆ. ನನಗೆ ಎಲ್ಲಿ ಒಳ್ಳೆಯದಾಗುತ್ತದೆ ಎಂದು ಅನಿಸುತ್ತದೆಯೋ ಅಲ್ಲಿಗೆ ಹೋಗುತ್ತೇನೆ. ನನ್ನ ನಂಬಿಕೆ ನನ್ನದು” ಎಂದು ಹೇಳಿದರು.
“ನನ್ನ ಕ್ಷೇತ್ರದಲ್ಲಿ ನನಗೆ ಮತ ಹಾಕಿರುವವರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಾಗಿದ್ದಾರೆ. ನನ್ನ ಕ್ಷೇತ್ರದಲ್ಲಿ ಶೇಕಡಾ 99 ರಷ್ಟು ಬ್ರಾಹ್ಮಣ ಸಮುದಾಯದವರು ನನಗೆ ಮತ ಹಾಕುತ್ತಾರೆ. ಹೀಗಾಗಿ ಬ್ರಾಹ್ಮಣರೆಲ್ಲರೂ ಬಿಜೆಪಿಗೇ ಮತ ಹಾಕುತ್ತಾರೆ ಎಂದು ಹೇಳಲು ಸಾಧ್ಯವೇ? ನಾನು ಎಂದಿಗೂ ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿ ಮೇಲೆ ರಾಜಕಾರಣ ಮಾಡುತ್ತೇನೆ” ಎಂದು ಹೇಳಿದರು.
“ಕಾಂಗ್ರೆಸ್ ಪಕ್ಷ ಎಂದರೆ ಎಲ್ಲಾ ಧರ್ಮಗಳ ಸಮಾಗಮ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಪಕ್ಷದ ಸಿದ್ಧಾಂತ. ನಾವು ಅಧಿಕಾರ, ಸ್ಥಾನಮಾನ ನೀಡುವಾಗ ಎಲ್ಲರನ್ನು ಪರಿಗಣಿಸಿಯೇ ನೀಡುತ್ತೇವೆ. ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಹಾಗೆಂದು ನಾವು ಧಾರ್ಮಿಕ ದತ್ತಿ ಇಲಾಖೆ ಮುಚ್ಚಿದ್ದೇವೆಯೇ? ಬಿಜೆಪಿ ಅಧಿಕಾರದಲ್ಲಿ ಇದ್ದಾಗ ವಕ್ಫ್ ಬೋರ್ಡ್ ಮುಚ್ಚಲಿಲ್ಲ ಯಾಕೆ? ಅವರು ಬೇರೆಯವರಿಗೆ ಟಿಕೆಟ್ ನೀಡದೆ ಇರಬಹುದು, ಆದರೆ ಕ್ರೈಸ್ತ ಅಭಿವೃದ್ಧಿ ಮಂಡಳಿ ಮುಚ್ಚಿದ್ದಾರಾ? ಇಲ್ಲ. ಇದಕ್ಕೆ ಕಾರಣ ನಮ್ಮ ಸಂವಿಧಾನ. ನಮ್ಮ ದೇಶದಲ್ಲಿ ಎಲ್ಲಾ ಧರ್ಮಕ್ಕೂ ಸಮಾನ ಅವಕಾಶ ನೀಡಲಾಗಿದೆ. ಅವರೆಲ್ಲ ಬೇರೆ ನೀರು ಕುಡಿಯಲು ಸಾಧ್ಯವೇ? ಈ ಭೂಮಿಗೆ, ಗಾಳಿಗೆ ಜಾತಿ, ಧರ್ಮದ ತಾರತಮ್ಯ ಇದೆಯೇ?” ಎಂದು ಪ್ರತಿ ಪ್ರಶ್ನೆ ಹಾಕಿದರು.
ರಾಹುಲ್ ಗಾಂಧಿ ದೊಡ್ಡ ಶಿವಭಕ್ತರು:
“ಈ ಹಿಂದೆ ಎಸ್ ಎಂ ಕೃಷ್ಣ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗ ಚುನಾವಣೆ ಯಾತ್ರೆಗೆ ‘ಪಾಂಚಜನ್ಯ’ ಎಂದು ಹೆಸರು ಇಟ್ಟಿದ್ದೆವು. ಆಗ ಕೆಲವರು ಸೋನಿಯಾ ಗಾಂಧಿ ಅವರ ಬಳಿ ಹೋಗಿ ದೂರು ಕೊಟ್ಟರು. ಆದರೆ ಅವರು ಅದಕ್ಕೆ ತಡೆ ನೀಡಲಿಲ್ಲ. ಹಿಂದೂಗಳನ್ನು ಬಿಜೆಪಿ ಹಾಗೂ ಆರ್ ಎಸ್ ಎಸ್ ನವರಿಗೆ ಬಿಟ್ಟುಕೊಟ್ಟಿದ್ದೇವಾ? ದೇವರ ಹೆಸರು ಇದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಹಾಗೂ ನನ್ನ ಹೆಸರು ಬದಲಿಸಲು ಆಗುತ್ತದೆಯೇ? ನಮ್ಮ ನಾಯಕ ರಾಹುಲ್ ಗಾಂಧಿ ಅವರು ದೊಡ್ಡ ಶಿವಭಕ್ತರು. ಮುರುಘಾ ಮಠದಲ್ಲಿ ಅವರು ಲಿಂಗ ದೀಕ್ಷೆ ಸ್ವೀಕರಿಸಿದರು” ಎಂದು ವಿವರಿಸಿದರು.
ಧರ್ಮ, ನಂಬಿಕೆ ವಿಚಾರದಲ್ಲಿ ರಾಜಕೀಯ ಬೇಡ:
“ಕುಂಭಮೇಳಕ್ಕೂ ಇದಕ್ಕೂ ಏನು ಸಂಬಂಧ? ನೀರಿಗೆ ಜಾತಿ, ಧರ್ಮ ಇದೆಯಾ? ಕುಂಭಮೇಳ, ಗಂಗಾ, ಕಾವೇರಿ ನಮ್ಮ ಪಾಲಿನ ಪವಿತ್ರ ನದಿಗಳು. ಮೊದಲಿನಿಂದಲೂ ಆಚರಣೆ ಮಾಡಿಕೊಂಡು ಬಂದಿರುವ ಪದ್ಧತಿ ಇದು. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಧರ್ಮ, ನಂಬಿಕೆ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ನಮ್ಮ ಸ್ಪೀಕರ್ ಸಹ ಕುಂಭಮೇಳಕ್ಕೆ ಹೋಗಬೇಕು ಎಂದು ಹೇಳಿದ್ದರು. ನಾನು ಕುಂಭ ಮೇಳದ ಆಯೋಜನೆಯನ್ನು ನೋಡಿಕೊಂಡು ಬಂದಿದ್ದೇನೆ. ನಾವು ಕಾವೇರಿ ಆರತಿ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ. ಈ ಹಿನ್ನೆಲೆಯಲ್ಲೂ ಇದನ್ನು ಗಮನಿಸಿದ್ದೇನೆ” ಎಂದು ತಿಳಿಸಿದರು.
ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ ಎಂದು ಕೇಳಿದಾಗ, “ನಾನು ಶಿವರಾತ್ರಿ ಹಬ್ಬದ ಪ್ರಯುಕ್ತ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಇದು ನನ್ನ ಸ್ವಂತ ನಂಬಿಕೆ. ಯಾರೋ ಟ್ವೀಟ್ ಮಾಡುತ್ತಾರೆ, ಯಾರೋ ಮಾತನಾಡುತ್ತಾರೆ ಎಂದು ನಾನು ಎಲ್ಲದಕ್ಕೂ ಉತ್ತರ ನೀಡಲು ಆಗುವುದಿಲ್ಲ” ಎಂದು ತಿಳಿಸಿದರು.
ನಿಮ್ಮ ಈ ನಡೆಯನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ ಎಂದು ಹೇಳಿದಾಗ, “ಬಿಜೆಪಿಯವರು ಸ್ವಾಗತಿಸುವುದೂ ಬೇಡ, ಬೇರೆ ಯಾರೂ ಸ್ವಾಗತಿಸುವುದು ಬೇಡ. ನೀವು (ಮಾಧ್ಯಮಗಳು) ಇದನ್ನು ಹೆಚ್ಚು ಚರ್ಚೆ ಮಾಡುವುದೂ ಬೇಡ. ಇದು ನನ್ನ ವೈಯಕ್ತಿಕ ವಿಚಾರ. ಸದ್ಗುರು ಅವರು ನಮ್ಮ ರಾಜ್ಯದವರು, ಮೈಸೂರಿನವರು. ಅವರು ಸೇವ್ ಸಾಯಿಲ್ ಸೇರಿದಂತೆ ಅನೇಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ನನ್ನ ಮನೆಗೆ ಬಂದು ಬಹಳ ಗೌರವದಿಂದ ಆಹ್ವಾನ ನೀಡಿದರು. ಅವರ ಆಚಾರ ವಿಚಾರವನ್ನು ನಾನು ಮೆಚ್ಚಿದ್ದೇನೆ. ಇದರ ಹೊರತಾಗಿ ಅವರು ಹಿಂದೆ ಏನು ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ರಾಹುಲ್ ಗಾಂಧಿ ನಮ್ಮ ನಾಯಕರು. ನಮ್ಮ ಎದುರು ಯಾರಾದರೂ ಅವರ ಬಗ್ಗೆ ಮಾತನಾಡಿದರೆ ನಾವು ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ” ಎಂದು ತಿಳಿಸಿದರು.
ನಾವು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ
“ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ” ಎಂಬ ನಿಮ್ಮ ಹೇಳಿಕೆಯನ್ನು ಬಿಜೆಪಿಯವರು ಸ್ವಾಗತಿಸುತ್ತಿದ್ದಾರೆ ಎಂದು ಹೇಳಿದಾಗ, “ನಾನು ಬೇರೆ ಧರ್ಮಕ್ಕೆ ಯಾಕೆ ಹೋಗಲಿ. ನನಗೆ ಎಲ್ಲಾ ಧರ್ಮಗಳ ಬಗ್ಗೆ ಪ್ರೀತಿ ಇದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ ಎಂಬುದನ್ನು ನಾನು ನಂಬಿದ್ದೇನೆ. ನಾವು ಇಂತಹ ಧರ್ಮದಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡಿರಲಿಲ್ಲ. ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಹುಟ್ಟಿ ಬೌದ್ಧ ಧರ್ಮಕ್ಕೆ ಸೇರಿದರು. ಅದು ಅವರ ವೈಯಕ್ತಿಕ ನಿರ್ಧಾರ. ನನ್ನ ವಿಚಾರವನ್ನೂ ಎಲ್ಲರೂ ಚರ್ಚೆ ಮಾಡಲಿ ಬಿಡಿ” ಎಂದರು.
ಟೀಕೆ ಮಾಡುವವರು ಅಧಿವೇಶನದಲ್ಲಿ ಮಾತನಾಡಲಿ
ಬೆಂಗಳೂರನ್ನು ನೀವು ಚೂರು ಚೂರು ಮಾಡಲು ಹೊರಟಿದ್ದೀರಿ ಎಂದು ಟೀಕೆ ಮಾಡಲಾಗುತ್ತಿದೆ ಎಂದು ಕೇಳಿದಾಗ, “ಟೀಕೆ ಮಾಡುವವರು ವಿಧಾನ ಮಂಡಲ ಅಧಿವೇಶನದಲ್ಲಿ ಬಂದು ಮಾತನಾಡಲಿ, ಅಲ್ಲಿ ಉತ್ತರ ಕೊಡುತ್ತೇನೆ” ಎಂದು ಸವಾಲು ಹಾಕಿದರು.
ಅಮಿತ್ ಶಾ ಅವರು ಕ್ಷೇತ್ರ ಮರುವಿಂಗಡಣೆ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಪಕ್ಷ ಒಂದು ದೇಶ, ಒಂದು ಚುನಾವಣೆಯನ್ನು ವಿರೋಧಿಸಿದ್ದು, ನಾವು ಅದಕ್ಕೆ ಬದ್ಧ. ಮಹಿಳಾ ಮೀಸಲಾತಿ ವಿಚಾರದಲ್ಲಿ ನಮ್ಮ ಬೆಂಬಲ ಇದೆ. ಇದನ್ನು ಜಾರಿ ಮಾಡಲು ಸೋನಿಯಾ ಗಾಂಧಿ ಅವರೇ ಒತ್ತಾಯಿಸುತ್ತಿದ್ದಾರೆ. ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಇದ್ದಾಗ ಮರುವಿಂಗಡಣೆ ಮಾಡಬಹುದು. ಆದರೆ ಅಷ್ಟು ಸಂಖ್ಯಾಬಲ ಸರ್ಕಾರಕ್ಕೆ ಇಲ್ಲ” ಎಂದು ತಿಳಿಸಿದರು.
ಪ್ರಾಣಿ ರಕ್ಷಣೆಯಲ್ಲಿನ ಉತ್ಕೃಷ್ಟ ಸೇವೆಗೆ ‘ಅನಂತ್ ಅಂಬಾನಿ’ಗೆ ‘ವಂತಾರ ರಾಷ್ಟ್ರೀಯ ಪ್ರಾಣಿ ಮಿತ್ರ ಪ್ರಶಸ್ತಿ’
BREAKING: ‘ಇಸ್ರೇಲ್’ನಲ್ಲಿ ಪಾದಚಾರಿಗಳಿಗೆ ವಾಹನ ಡಿಕ್ಕಿ: ಹಲವರಿಗೆ ಗಾಯ, ‘ಭಯೋತ್ಪಾದಕ ದಾಳಿ’ ಶಂಕೆ