ಮಂಗಳೂರು: ರಾಜ್ಯದಲ್ಲಿ ಮಸಾಜ್ ಹಾಗೂ ಸ್ಪಾ ಹೆಸರಿನಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸೂಕ್ತ ಕಾನೂನು ರೂಪಿಸಬೇಕೆಂಬ ಆಗ್ರಹ ಹೆಚ್ಚಿದೆ. ಕೇರಳದಲ್ಲಿ ಅಸ್ತಿತ್ವದಲ್ಲಿರುವಂತೆಯೇ ಕರ್ನಾಟಕದಲ್ಲೂ ಸೂಕ್ತ ಕಾಯ್ದೆ ಜಾರಿಗೆ ತರಬೇಕೆಂದು ವಕೀಲರ ಸಮೂಹ ಆಗ್ರಹಿಸಿದೆ.
ರಾಜ್ಯದಲ್ಲಿ Spa ಕೇಂದ್ರಗಳ ಮೇಲೆ ಪೊಲೀಸರು ಆಗಾಗ್ಗೆ ದಾಳಿ ನಡೆಸುತ್ತಿರುವ ಸನ್ನಿವೇಶಗಳು ಮರುಕಳಿಸುತ್ತಿವೆ. ಮಸಾಜ್ ಹಾಗೂ ಸ್ಪಾ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕಾನೂನೇ ಇಲ್ಲದಿರುವಾಗ ಅಕ್ರಮ ಎಂಬ ವ್ಯಾಖ್ಯಾನವೂ ಇರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪೊಲೀಸರು ಮಸಾಜ್ ಹಾಗೂ ಸ್ಪಾ ವಿರುದ್ಧ ಕೈಗೊಳ್ಳುವ ಕಾರ್ಯಾಚರಣೆಗಳೂ ಅನೈತಿಕವಾಗುತ್ತದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯ.
ಈ ವಿಚಾರದಲ್ಲಿ ರಾಜ್ಯದ ನ್ಯಾಯಾಂಗ ಕ್ಷೇತ್ರದ ಪರಿಣಿತರು ಇಟ್ಟಿರುವ ಹೆಜ್ಜೆ ಗಮನಸೆಳೆದಿದೆ. ಈ ಸಂಬಂಧ ಮಾಜಿ ಸರ್ಕಾರಿ ಅಭಿಯೋಜಕರೂ ಆದ ಮನೋರಾಜ್ ರಾಜೀವ್ ನೇತೃತ್ವದಲ್ಲಿ ಮಂಗಳೂರಿನ ವಕೀಲರ ತಂಡವು ರಾಜ್ಯ ಸರ್ಕಾರ ಹಾಗೂ ಪ್ರತಿಪಕ್ಷ ನಾಯಕರಿಗೆ ಮನವಿ ಸಲ್ಲಿಸಿ, ಮಸಾಜ್ ಹಾಗೂ ಸ್ಪಾ ಇತ್ಯಾದಿ ಹೆಲ್ತ್ ಕೇರ್ ಸೆಂಟರ್ ಗಳಿಗೆ ಸೂಕ್ತ ಕಾನೂನು ರೂಪಿಸಬೇಕೆಂದು ಆಗ್ರಹಿಸಿದೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ವಕೀಲರಾದ ಶಿಶಿರ್ ಭಂಡಾರಿ, ರೋಶನಿ ಸೊರಬ್, ನಾದಿನಿ ಅಖಿಲ್ ಉಪಸ್ಥಿತಿಯಲ್ಲಿ ಹಿರಿಯ ನ್ಯಾಯವಾದಿ ಮನೋರಾಜ್ ರಾಜೀವ್ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದಲ್ಲಿ ಮಸಾಜ್ ಹಾಗೂ ಸ್ಪಾ ಹೆಸರಿನಲ್ಲಿ ನಡೆಯುತ್ತಿರುವ ಅನೈತಿಕ ದಂಧೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೆಲವು ಮಾಫಿಯಾಗಳ ಅನೈತಿಕ ದಂಧೆಯಿಂದಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರಿಗೆ ಅನ್ಯಾಯವಾಗುತ್ತಿದೆ ಎಂದು ಗಮನಸೆಳೆದರು. ಆಯುರ್ವೇದಿಕ್, ಮಸಾಜ್, ಸ್ಪಾ, ಹೇರ್ ಕೇರ್ ಸಹಿತ ಹೆಲ್ತ್ ಕೇರ್ ಸೆಂಟರ್ ಗಳ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಸೂಕ್ತ ಕಾನೂನು ರೂಪಿಸಬೇಕು ಹಾಗೂ ಆ ಉದ್ಯಮ ಕ್ಷೇತ್ರವನ್ನು ನಿಯಂತ್ರಣಕ್ಕೊಳಪಡಿಸಬೇಕು ಎಂದು ಆರ್.ಮನೋರಾಜ್ ಪ್ರತಿಪಾದಿಸಿದರು.
ಕೇರಳ ರಾಜ್ಯದಲ್ಲಿ ಈ ಸಂಬಂಧ ಕಾನೂನು ಜಾರಿಯಲ್ಲಿದೆ. 2007ರಲ್ಲೇ ಕೇರಳ ಸರ್ಕಾರವು ಆಯುರ್ವೇದಿಕ್, ಮಸಾಜ್, ಸ್ಪಾ, ಹೇರ್ ಕೇರ್ ಸಹಿತ ಹೆಲ್ತ್ ಕೇರ್ ಸೆಂಟರ್ ಗಳಿಗೆ ಪರವಾನಿಗೆ ನೀಡಲು ಹಾಗೂ ಚಟುವಟಿಕೆಗಳನ್ನು ನಿಯಂತ್ರಣ ವ್ಯಾಪ್ತಿಯಲ್ಲಿ ತರಲು ಸೂಕ್ತ ಕಾಯ್ದೆ ಜಾರಿಗೊಳಿಸಿದೆ. ಕಾಯ್ದೆಯಲ್ಲಿನ ಷರತ್ತುಗಳನ್ನು ಪೂರೈಸದಿದ್ದಲ್ಲಿ ಉದ್ಯಮ ನಡೆಸಲು ಅನುಮತಿಯನ್ನೇ ನೀಡಲಾಗುತ್ತಿಲ್ಲ. ಒಂದೊಮ್ಮೆ ಅನುಮತಿ ಪಡೆದು ಅನೈತಿಕ ದಂಧೆ ನಡೆಸಿದಲ್ಲಿ ಕಾಯ್ದೆಯಂತೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಹಾಗಾಗಿ ಕೇರಳದಲ್ಲಿ ಆಯುರ್ವೇದಿಕ್, ಮಸಾಜ್, ಸ್ಪಾ, ಹೇರ್ ಕೇರ್ ಸಹಿತ ಹೆಲ್ತ್ ಕೇರ್ ಸೆಂಟರ್ ಹೆಸರಿನಲ್ಲಿ ಅನೈತಿಕತೆಗೆ ಅವಕಾಶ ಇಲ್ಲ ಎಂದು ಮನೋರಾಜ್ ರಾಜೀವ್ ಗಮನಸೆಳೆದರು. ಆದರೆ, ಕರ್ನಾಟಕದಲ್ಲಿ ಕಾನೂನೇ ಇಲ್ಲ ಎಂದಾಗ ಅನೈತಿಕ ಎಂದು ಪರಿಗಣಿಸಲು ಅವಕಾಶವೇ ಇಲ್ಲ, ಇಂತಹಾ ಸನ್ನಿವೇಶದಲ್ಲಿ ವೇಶ್ಯಾವಾಟಿಕೆ ಎಂಬ ಸುಳ್ಳು ಆರೋಪ ಹೊರಿಸಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರಿಂದಾಗಿ ಅನೇಕ ಸಭ್ಯರೂ ಅಪಮಾನಕ್ಕೆ ಗುರಿಯಾಗುತ್ತಿದ್ದಾರೆ. ಹಾಗಾಗಿ ಈ ಉದ್ಯಮ ಕ್ಷೇತ್ರವನ್ನು ಅವಲಂಭಿಸಿರುವ ಸಾಕಷ್ಟು ಮಹಿಳೆಯರೂ ತಮ್ಮ ದುಡಿಮೆಯ ಸ್ವಾತಂತ್ರ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಹಿರಿಯ ವಕೀಲ ಮನೋರಾಜ್ ಕಳವಳ ವ್ಯಕ್ತಪಡಿಸಿದರು.
ಪುರುಷರು ಪೃಷರನ್ನೇ.. ಮಹಿಳೆಯರು ಮಹಿಳೆಯರನ್ನೇ..!?
ಪ್ರಸ್ತುತ ಆಯುರ್ವೇದಿಕ್, ಮಸಾಜ್, ಸ್ಪಾ, ಹೇರ್ ಕೇರ್ ಸಹಿತ ಹೆಲ್ತ್ ಕೇರ್ ಸೆಂಟರ್ ಗಳಲ್ಲಿ ಪುರುಷರು ಮಹಿಳೆಯರಿಗೆ ಸೇವೆ ನೀಡುವಂತಿಲ್ಲ. ಅದೇ ರೀತಿ ಮಹಿಳೆಯರು ಪುರುಷರಿಗೆ ಸೇವೆ ನೀಡುವುದನ್ನು ಪೊಲೀಸರು ಆಕ್ಷೇಪಿಸುತ್ತಿದ್ದಾರೆ. ಪೊಲೀಸರ ನಡೆಯು ಕಾನೂನು ರೀತಿಯಲ್ಲಿ ತಪ್ಪು. ಯಾಕೆಂದರೆ, ಆಸ್ಪತ್ರೆಗಳಲ್ಲಿನ ನರ್ಸುಗಳಿಗೆ, ಪ್ರಸೂತಿ ವೈದ್ಯರಿಗೆ ಅನ್ವಯವಾಗದ ಲಿಂಗ ಅಸಮಾನತೆಯು ಆಯುರ್ವೇದಿಕ್, ಮಸಾಜ್, ಸ್ಪಾ, ಹೇರ್ ಕೇರ್ ಸಹಿತ ಹೆಲ್ತ್ ಕೇರ್ ಸೆಂಟರ್ ಗಲ್ಲಿನ ಪರಿಣಿತರಿಗೆ ಅನ್ವಯವಾಗಲು ಹೇಗೆ ಸಾಧ್ಯ ಎಂದು ಮನೋರಾಜ್ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಆಯುರ್ವೇದ ಆರೋಗ್ಯ ಕೇಂದ್ರಗಳು, ಸ್ಪಾಗಳು, ಯುನಿಸೆಕ್ಸ್ ಸಲೂನ್‌ಗಳು ಮತ್ತು ಬ್ಯೂಟಿ ಪಾರ್ಲರ್‌ಗಳನ್ನು ನಿಯಂತ್ರಿಸಲು ಕಾನೂನು ಜಾರಿಗೆ ತರುವ ಪ್ರಸ್ತಾವನೆ ಅಗತ್ಯವಿದೆ. ಇವುಗಳು ದೇಶದ ಪಾರಂಪರಿಕ ಉದ್ಯಮವಾಗಿದ್ದು, ಲಕ್ಷಾಂತರ ಮಂದಿ ಈ ಕ್ಷೇತ್ರವನ್ನು ಅವಲಂಭಿಸಿದ್ದಾರೆ. ಹೀಗಿರುವಾಗ ಸೂಕ್ತ ಕಾನೂನು ರೂಪಿಸದೆ ಇದ್ದಲ್ಲಿ ಅನೈತಿಕತೆಯ ಸುಳ್ಳು ಆರೋಪ ಹಾಗೂ ಕಿರುಕುಳಕ್ಕೆ ಗುರಿಯಾಗಿ ಆ ಉದ್ಯಮವನ್ನು ಅವಲಂಭಿಸಿರುವವರು ನಿರುದ್ಯೋಗಿಗಳಾಗಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ಜಿಲ್ಲಾಡಳಿತಕ್ಕೂ ಮನವರಿಕೆಯಾಗಿದೆ:
“ಈ ಹಿಂದೆ ನಾನು ಸರ್ಕಾರಿ ವಕೀಲರಾಗಿದ್ದಾಗ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಈ ಸಮಸ್ಯೆ ಕುರಿತಂತೆ ಹಾಗೂ ಯಾವ ರೀತಿಯಲ್ಲಿ ಪರಿಹಾರ ಸಾಧ್ಯವಿದೆ ಎಂಬ ಬಗ್ಗೆ ಸಲಹೆ ನೀಡಿದ್ದೆ. ಅದಕ್ಕೆ ಸಹಮತ ವ್ಯಕ್ತಪಡಿಸಿದ್ದ ಜಿಲ್ಲಾಡಳಿತ ಸೂಕ್ತ ಕ್ರಮದ ಬಗ್ಗೆ ಭರವಸೆ ನೀಡಿತ್ತು. ಆದರೆ ಈಗಿನ್ನೂ ನಿಯಮ ಜಾರಿಯಾಗಿಲ್ಲ” ಎಂದ ಮನೋರಾಜ್ ರಾಜೀವ್, “ಇದು ಕರ್ನಾಟಕದ ಒಂದು ರಾಜ್ಯಕ್ಕೆ ಸೀಮಿತವಾಗಿರುವ ಸಮಸ್ಯೆಯಲ್ಲ, ರಾಜ್ಯಾದ್ಯಂತ ಇರುವ ಸಮಸ್ಯೆಯಾಗಿದ್ದು ಈ ಸಂಬಂಧ ರಾಜ್ಯ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು” ಎಂದು ಒತ್ತಾಯಿಸಿದರು.
ಸೂಕ್ತ ಕಾಯ್ದೆಯ ಕೊರತೆಯಿಂದಾಗಿ ಸೆಲೂನ್, ಮಸಾಜ್ ಕೇಂದ್ರ, ಹೆಲ್ತ್ ಕೇರ್ ಸೆಂಟರ್ ಗಳು ಯಾವ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತವೆ ಎಂಬುದು ಗೊಂದಲವಾಗಿ ಕಾಡುತ್ತಿದೆ. ಚಿಕಿತ್ಸಾ ಸ್ವರೂಪದಲ್ಲಿ ಸ್ಥಾಪನೆಯಾದ ಕೇಂದ್ರಗಳು KPME Act (Karnataka Private Medical Establishment Act) ಅಡಿಯಲ್ಲಿ ಬರುತ್ತವೆ, ಇನ್ನೂ ಕೆಲವು Shops & Establishment Act ಅಡಿಯಲ್ಲಿ ಕಾರ್ಯಾಚರಿಸುತ್ತಿರುತ್ತವೆ. ಆದರೆ ಸೂಕ್ತ ಕಾನೂನು ಇಲ್ಲದಿರುವುದರಿಂದಾಗಿ ಲೈಸನ್ಸ್ ವಿಚಾರದಲ್ಲಿ ಮಾನದಂಡ ಪಾಲಿಸಲು ಅಧಿಕಾರಿಗಳೇ ವಿಫಲರಾಗುತ್ತಿದ್ದಾರೆ ಎಂದವರು ಪರಿಸ್ಥಿತಿ ಬಗ್ಗೆ ವಿಶ್ಲೇಷಿಸಿದರು.
ಕರ್ನಾಟಕದ ವಿವಿಧ ಭಾಗಗಳಲ್ಲಿ ಆಯುರ್ವೇದ ಆರೋಗ್ಯ ಕೇಂದ್ರಗಳು, ಮಸಾಜ್ ಕೇಂದ್ರಗಳು, ಸ್ಪಾಗಳು, ಯುನಿಸೆಕ್ಸ್ ಸಲೂನ್‌ಗಳು ಮತ್ತು ಬ್ಯೂಟಿ ಪಾರ್ಲರ್‌ಗಳು ವೇಗವಾಗಿ ಬೆಳೆಯುತ್ತಿವೆ. ಇದೇ ಸಂದರ್ಭದಲ್ಲಿ ಕಾನೂನುಬಾಹಿರ ಮತ್ತು ಅನೈತಿಕ ಚಟುವಟಿಕೆಗಳ ಪ್ರಕರಣಗಳು ಸಹ ಬೆಳಕಿಗೆ ಬರುತ್ತಿರುವುದರಿಂದ ಆಯುರ್ವೇದದ ಪ್ರತಿಷ್ಠೆಗೆ ಕಳಂಕ ಉಂಟಾಗುತ್ತದೆ ಮತ್ತು ರಾಜ್ಯಕ್ಕೆ ಅಪಖ್ಯಾತಿ ಉಂಟಾಗುತ್ತದೆ.ಹಾಗಾಗಿ ಕೇರಳ ಮಾದರಿಯಲ್ಲೇ ಕರ್ನಾಟಕದಲ್ಲೂ ಸೂಕ್ತ ಕಾಯ್ದೆಯನ್ನು ತುರ್ತಾಗಿ ಜಾರಿಗೆ ತರಬೇಕೆಂದು ವಕೀಲರು ಆಗ್ರಹಿಸಿದ್ದಾರೆ.