ಬೆಂಗಳೂರು: ರಾಜ್ಯದ ರೈತರಿಗೆ ಮತ್ತು ಆಸ್ತಿ ಮಾಲೀಕರಿಗೆ ಕಂದಾಯ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಜಮೀನಿನ ಪಹಣಿ ತಿದ್ದುಪಡಿ ಅಥವಾ ಮ್ಯುಟೇಷನ್ (Mutation) ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ವಿಳಂಬವನ್ನು ತಪ್ಪಿಸಲು ‘ಸ್ವಯಂಚಾಲಿತ ಮ್ಯುಟೇಷನ್’ (Auto Mutation) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಹೊಸ ಪದ್ಧತಿಯ ಮುಖ್ಯಾಂಶಗಳು:
ಮಾನವ ಹಸ್ತಕ್ಷೇಪ ಮುಕ್ತ: ಈ ಹಿಂದೆ ನೋಟೀಸು ಅವಧಿ ಮುಗಿದ ನಂತರ ಕಂದಾಯ ನಿರೀಕ್ಷಕರು (RI) ಡಿಜಿಟಲ್ ಸಹಿ ಮಾಡುವವರೆಗೆ ಕಾಯಬೇಕಿತ್ತು. ಆದರೆ ಹೊಸ ಪದ್ಧತಿಯಲ್ಲಿ ಯಾವುದೇ ಅಧಿಕಾರಿಯ ಹಸ್ತಕ್ಷೇಪವಿಲ್ಲದೆ, ಸಾಫ್ಟ್ವೇರ್ ಮೂಲಕವೇ ಸ್ವಯಂಚಾಲಿತವಾಗಿ ಅನುಮೋದನೆ ದೊರೆಯಲಿದೆ.
ನೋಟೀಸು ಅವಧಿ: ನೋಂದಾಯಿತ ದಾಖಲೆಗಳಿಗೆ (ಕ್ರಯ, ವಿಭಾಗ, ದಾನ ಇತ್ಯಾದಿ) 7 ದಿನಗಳ ಕಾಲಾವಕಾಶ.
ನೋಂದಾಯಿತವಲ್ಲದ ದಾಖಲೆಗಳಿಗೆ (ವಂಶವೃಕ್ಷ, ಮರಣ ನಂತರದ ಖಾತೆ ಬದಲಾವಣೆ) 15 ದಿನಗಳ ಕಾಲಾವಕಾಶ.
ಆಕ್ಷೇಪಣೆ ಸಲ್ಲಿಸಲು ಅವಕಾಶ: ಒಂದು ವೇಳೆ ನಿಗದಿತ 7 ಅಥವಾ 15 ದಿನಗಳ ಒಳಗೆ ಸಾರ್ವಜನಿಕರು ಅಥವಾ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದರೆ ಮಾತ್ರ ಅಂತಹ ಪ್ರಕರಣಗಳನ್ನು ತಹಶೀಲ್ದಾರ್ ನ್ಯಾಯಾಲಯಕ್ಕೆ (RCCMS) ವರ್ಗಾಯಿಸಲಾಗುತ್ತದೆ. ಯಾವುದೇ ಆಕ್ಷೇಪಣೆ ಬರದಿದ್ದರೆ ಸಿಸ್ಟಮ್ ತಾನಾಗಿಯೇ ಅನುಮೋದನೆ ನೀಡುತ್ತದೆ.
ನೋಟೀಸು ರಹಿತ ಮ್ಯುಟೇಷನ್: ಈಗಾಗಲೇ 2024 ರಿಂದ ಏಪ್ರಿಲ್ನಿಂದ ಕೋರ್ಟ್ ಆದೇಶ, ಭೂಸ್ವಾಧೀನ, ಅಡಮಾನ ಬಿಡುಗಡೆಯಂತಹ 9 ರೀತಿಯ ಪ್ರಕರಣಗಳಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚು ಮ್ಯುಟೇಷನ್ಗಳನ್ನು ಸ್ವಯಂಚಾಲಿತವಾಗಿ ಮಾಡಲಾಗಿದೆ.
ರೈತರಿಗೆ ಆಗುವ ಅನುಕೂಲಗಳೇನು?
ಸಮಯದ ಉಳಿತಾಯ: ಕಚೇರಿಗಳಿಗೆ ಅಲೆಯುವ ಕೆಲಸ ತಪ್ಪಲಿದೆ.
SMS ಮೂಲಕ ಮಾಹಿತಿ: ಮ್ಯುಟೇಷನ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಸಂಬಂಧಪಟ್ಟವರಿಗೆ ಎಸ್ಎಮ್ಎಸ್ ಮೂಲಕ ಮಾಹಿತಿ ತಲುಪಲಿದೆ.
ಇ-ಚಾವಡಿಯಲ್ಲಿ ವೀಕ್ಷಣೆ: ಸಾರ್ವಜನಿಕರು ಮ್ಯುಟೇಷನ್ ವಿವರಗಳನ್ನು ‘ಇ-ಚಾವಡಿ’ ಪೋರ್ಟಲ್ನಲ್ಲಿ ಸುಲಭವಾಗಿ ವೀಕ್ಷಿಸಬಹುದು.
ಭ್ರಷ್ಟಾಚಾರಕ್ಕೆ ಬ್ರೇಕ್: ಅಧಿಕಾರಿಗಳ ವಿಳಂಬ ನೀತಿ ಮತ್ತು ಹಸ್ತಕ್ಷೇಪಕ್ಕೆ ಇಲ್ಲಿ ಅವಕಾಶವಿಲ್ಲ.
ಗಮನಿಸಿ: ಸರ್ಕಾರಿ ಜಮೀನುಗಳು ಮತ್ತು ಪಿ.ಟಿ.ಸಿ.ಎಲ್ ವ್ಯಾಪ್ತಿಗೆ ಬರುವ ಜಮೀನುಗಳ ದುರ್ಬಳಕೆ ತಡೆಯಲು, ಅಂತಹ ಜಮೀನುಗಳನ್ನು ಸಾಫ್ಟ್ವೇರ್ನಲ್ಲಿ ಲಾಕ್ ಮಾಡಲಾಗಿದ್ದು, ಅವು ಈ ಸ್ವಯಂಚಾಲಿತ ವ್ಯವಸ್ಥೆಯ ವ್ಯಾಪ್ತಿಗೆ ಬರುವುದಿಲ್ಲ.









