ಬೆಂಗಳೂರು: ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಈಗ ಕೇಂದ್ರ ಮಂತ್ರಿಯಾಗಿರುವವರು. ಅವರಿಗೆ ಕನಿಷ್ಠ ಪರಿಜ್ಞಾನ ಇರಬೇಕಾಗಿತ್ತು. ಯಾವುದೇ ಜಮೀನು ನೋಟಿಫೈ ಅಥವಾ ಡಿನೋಟಿಫೈ ಆಗುವುದು ವ್ಯಕ್ತಿಯ ಹೆಸರ ಮೇಲೆ ಅಲ್ಲ. ಆ ಜಮೀನಿನ ಸರ್ವೇ ಸಂಖ್ಯೆ ಮೇಲೆ ಅಂತ ಕಾಂಗ್ರೆಸ್ ವಕ್ತಾರರಾದ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮಾಧ್ಯಮಗೋಷ್ಠಿ ನಡೆಸಿ ಸತ್ತ ವ್ಯಕ್ತಿ ಹೆಸರಲ್ಲಿ ಹೇಗೆ ಡಿನೋಟಿಫಿಕೇಶನ್ ಆಗುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ.
ಕುಮಾರಸ್ವಾಮಿ ಅವರೇ ನಿಮಗೆ ಈ ವಿಚಾರದಲ್ಲಿ ಟ್ಯೂಷನ್ ಮಾಡಿದವರನ್ನೇ ಒಮ್ಮೆ ಕೇಳಿನೋಡಿ. ನೋಟಿಫೈ ಅಥವಾ ಡಿನೋಟಿಫೈ ಮಾಡುವಾಗ ಜಾಗದ ಸರ್ವೇ ಸಂಖ್ಯೆ, ವಿಸ್ತೀರ್ಣವನ್ನು ತಿಳಿಸುತ್ತಾರೆ.
ಈ 3 ಎಕರೆ 16 ಗುಂಟೆ ಜಾಗದ ಡಿನೋಟಿಫಿಕೇಶನ್ ಪ್ರತಿಯೂ ನನ್ನ ಬಳಿ ಇದೆ. ಇದರಲ್ಲಿ ಯಾವುದಾದರೂ ವ್ಯಕ್ತಿಯ ಹೆಸರು ಇದೆಯೇ? ಇದ್ದರೆ ತೋರಿಸಿ. ಕುಮಾರಸ್ವಾಮಿ ಅವರೇ ಬಿಜೆಪಿ ಹಾಗೂ ಜೆಡಿಎಸ್ ನವರು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುವ ಉದ್ದೇಶಕ್ಕೆ ಟೈಪ್ ಮಾಡಿರುವುದನ್ನು ತೋರಿಸಬೇಡಿ. ನಿಜವಾದ ದಾಖಲೆ ತೋರಿಸಿ ಸ್ವಾಮಿ ಅಂತ ಆಗ್ರಹಿಸಿದ್ದಾರೆ.
ಅಂದಹಾಗೆ, ಪಾರ್ವತಿ ಸಿದ್ದರಾಮಯ್ಯ ಅವರಿಗೆ ಈ ಜಮೀನು 2010ರಲ್ಲಿ ಬಂದಿದ್ದು, ಅದಾದ ನಂತರ ಏನಾದರೂ ಅಕ್ರಮ ಆಗಿದ್ದರೆ ನೀವು ಅದನ್ನು ಪ್ರಶ್ನೆ ಮಾಡಬೇಕು. ಅದಕ್ಕಿಂತ ಮುಂಚಿನ ವಿಚಾರದ ಬಗ್ಗೆ ನಾವು ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಆದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಿದ್ದರಾಮಯ್ಯ ದಂಪತಿಗಳ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ, ಜನರಿಗೆ ಸ್ಪಷ್ಟ ಮಾಹಿತಿ ರವಾನೆ ಮಾಡಲು ಈ ವಿಚಾರಗಳನ್ನು ತಿಳಿಸುತ್ತಿದ್ದೇವೆ.
ಡಿನೋಟಿಫಿಕೇಶನ್ ಸಂದರ್ಭದಲ್ಲಿ ದೇವರಾಜು ಅವರು ಒಂದು ಪತ್ರ ನೀಡುತ್ತಾರೆ. ಅದರಲ್ಲಿ, ಮೈಸೂರು ತಾಲ್ಲೂಕು ದೇವನೂರು ಗ್ರಾಮದ ನಿವಾಸಿಯಾದ ಜೆ.ದೇವರಾಜ್ ಅವರು ದಿನಾಂಕ 30-10-2003ರ ಅರ್ಜಿಯಲ್ಲಿ ಸರ್ಕಾರ 18-05-1998ರಲ್ಲಿ ಹೊರಡಿಸಿದ ಅಧಿಸೂಚನೆಯ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ 3 ಎಕರೆ 16 ಗುಂಟೆ ಜಾಗವನ್ನು ಭೂಸ್ವಾಧೀನದ ಕೈ ಬಿಟ್ಟಿರುವುದರಿಂದ ಪಹಣಿಯಲ್ಲಿ ಮೂಲ ಖಾತೆದಾರರ ಹೆಸರನ್ನು ಕಾಲಂ 9ರಲ್ಲಿ ಇಡುವಂತೆ ಕೋರಿದ್ದಾರೆ”.
ಈ ಮೂಲಕ ನೀವು ನಿಂಗ ಬಿನ್ ಜವರ ಅವರ ಹೆಸರಿನಲ್ಲಿ ನೋಟಿಫಿಕೇಶನ್ ಮಾಡಿದ್ದು, ಅವರ ಹೆಸರಿನಲ್ಲಿ ಡಿನೋಟಿಫಿಕೇಶನ್ ಮಾಡಿ. ಆಮೂಲಕ ಯಾವುದೇ ಗೊಂದಲ ಸೃಷ್ಟಿಯಾಗುವುದು ಬೇಡ ಎಂದು ಜೆ.ದೇವರಾಜ್ ಅವರು ಪತ್ರ ಬರೆಯುತ್ತಾರೆ. ಹಾಗಾಗಿ ಡಿನೋಟಿಫಿಕೇಶನ್ ಅನ್ನು ನಿಂಗ ಬಿನ್ ಜವರ ಅವರ ಹೆಸರಲ್ಲಿ ಮಾಡಲಾಗಿದೆ.
ಕುಮಾರಸ್ವಾಮಿ ಅವರ ಆರೋಪ ನೋಡಿದರೆ, ಸಿದ್ದರಾಮಯ್ಯ ಅವರೇ ಹೋಗಿ ಸತ್ತವರ ಹೆಸರಲ್ಲಿ ಡಿನೋಟಿಫಿಕೇಶನ್ ಮಾಡಿ ಸಹಿ ಹಾಕಿ, ಅವರೇ ತಾಲ್ಲೂಕು ಕಚೇರಿಯಲ್ಲಿ ಠಸ್ಸೆ ಹಾಕಿಸಿರುವಂತೆ ಹೇಳುತ್ತಿದ್ದಾರೆ.
2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಅವರು ಈ ಜಮೀನು ಖರೀದಿ ಮಾಡಿ 2005ರಲ್ಲಿ ಇದನ್ನು ಕನ್ವರ್ಷನ್ ಗೆ ಹಾಕುತ್ತಾರೆ. ಇದರಲ್ಲಿ ತಪ್ಪೇನಿದೆ. ನಮ್ಮ ಜಮೀನನ್ನು ನಮ್ಮ ಗಮನಕ್ಕೆ ತಾರದೆ ಅದನ್ನು ಬಳಸಿಕೊಂಡು ಲೇಔಟ್ ಮಾಡಿ ಹಂಚಿರುವುದು ಮೂಡಾದವರು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ಪಾರ್ವತಮ್ಮ ಅವರಿಗೆ ಜಾಮೀನು ನೀಡಿರುವುದು ಅಕ್ರಮವಲ್ಲ ಅದು ಪಾರ್ವತಮ್ಮ ಅವರ ಹಕ್ಕಿನಂತೆ ನೀಡಿರುವ ಜಮೀನು. ಇದಕ್ಕೂ ಮೂಡಾ ಹಗರಣಕ್ಕೂ ತಳುಕು ಹಾಕುವುದು ಬೇಡ. ನಿಜವಾಗಿಯೂ ಹಗರಣ ಯಾವುದು ಎಂದರೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಕುಟುಂಬದ ಉದಾಹರಣೆ ನೀಡುತ್ತೇನೆ.
ಎಸ್ ಸಿ ರಾಜೇಶ್ ಬಿನ್ ಚಂದ್ರಪ್ಪ. ಇವರು ಮೈಸೂರಿನವರು. ಇವರು ಮಾನ್ಯ ಯಡಿಯೂರಪ್ಪನವರ ತಂಗಿ ಮಗ. ಬಿ.ವೈ ವಿಜಯೇಂದ್ರ ಅವರಿಗೆ ಮಾವ ಆಗಬೇಕು. ಇವರು ಒಬ್ಬ ನಕಲಿ ವ್ಯಕ್ತಿಯನ್ನು ಸೃಷ್ಟಿಸಿ ಅ ವ್ಯಕ್ತಿಯಿಂದ 50:50 ಅನುಪಾತದಲ್ಲಿ ಮೈಸೂರು ತಾಲ್ಲೂಕು ಕಸಬಾ ಹೋಬಳಿ ಇನಕಲ್ ಗ್ರಾಮ ಸರ್ವೇ ಸಂಖ್ಯೆ 255/3 ರಲ್ಲಿ 33 ಗುಂಟೆ ಜಮೀನನ್ನು ಪ್ರಾಧಿಕಾರ ಭೂಸ್ವಾಧೀನ ಪಡಿಸಿಕೊಳ್ಳದೆ ಉಪಯೋಗಿಸಿಕೊಂಡಿರುವ ಬಾಪ್ತು, ಪ್ರಾಧಿಕಾರದ ನಿರ್ಣಯ ದಿನಾಂಕ: 06-11-2020, ಹಾಗೂ ದಿನಾಂಕ 11-02-2015ರ ಅನ್ವಯ ಶೇ. 50:50 ಅನುಪಾತದಲ್ಲಿ 8994 ಚದರ ಅಡಿ ನಿವೇಶನವನ್ನು ಬದಲಿ ಪರಿಹಾರವಾಗಿ ಮಂಜೂರು ಮಾಡಿ ಆದೇಶಿಸಿದೆ. ಇಲ್ಲಿ ಯಾವ ರೀತಿ ಅಕ್ರಮ ಮಾಡಲಾಗಿದೆ ಎಂದರೆ, ಪ್ರಸ್ತುತ ಜಮೀನಿನ ಭೂಸ್ವಾಧೀನತೆಗೆ ಸಂಬಂಧಿಸಿದ ಮೂಲ ಕಡತವು ಲಭ್ಯವಿಲ್ಲ ಎಂಬ ಬಗ್ಗೆ ಅಭಿಲೆಕಾಲಯ ನಿರ್ವಾಹಕರಿಂದ ವರದಿ ಪಡೆಯಲಾಗಿದೆ.
ಜಾಗವೇ ಇಲ್ಲದೆ, 50:50 ಅನುಪಾತದಲ್ಲಿ ಅಂದಿನ ಮೂಡಾ ಆಯುಕ್ತರು ಇವರಿಗೆ 33 ಗುಂಟೆ ಜಾಗಕ್ಕೆ ಬದಲಿಯಾಗಿ 9 ಸಾವಿರ ಚದರಡಿ ನಿವೇಶನ ನೀಡುತ್ತಾರೆ. ಈ ನಕಲಿ ವ್ಯಕ್ತಿಯಿಂದ ರಾಜೇಶ್ ಬಿನ್ ಚಂದ್ರಪ್ಪ ಅವರು ನಿವೇಶನ ಖರೀದಿ ಮಾಡಿದ್ದಾರೆ.
ಇನ್ನು ಮತ್ತೊಂದು ಪ್ರಕರಣಕ್ಕೆ ಕುಮಾರಸ್ವಾಮಿ ಅವರು ಉತ್ತರ ನೀಡಬೇಕು.
ಮಹೇಂದ್ರ ಬಿನ್ ಚನ್ನೇಗೌಡ. ಈತನ ವಿಳಾಸ ಗುಂಗರಾಲ್ ಛತ್ರ ಗ್ರಾಮ ಮೈಸೂರು. ಇವರ ಬಳಿ ಜಾಗವೇ ಇಲ್ಲದೆ 50:50 ಅನುಪಾತದಲ್ಲಿ 19 ನಿವೇಶನಗಳಿವೆ. 7-5-2021ರಲ್ಲಿ ಈ 19 ನಿವೇಶನಗಳು ನೊಂದಣಿಯಾಗುತ್ತವೆ. ಈ ಮಹೇಂದ್ರ ಎಂಬುವವನು ಜೆಡಿಎಸ್ ಪ್ರಮುಖ ನಾಯಕನಿಗೆ ಬಹಳ ಹತ್ತಿರವಾಗಿದ್ದು, ಇದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ.