ಸ್ಥೂಲಕಾಯದಿಂದ ಬಳಲುತ್ತಿರುವ ಜನರು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗುವ ಅಥವಾ ಸಾಂಕ್ರಾಮಿಕ ರೋಗಗಳಿಂದ ಸಾಯುವ ಸಾಧ್ಯತೆ ಹೆಚ್ಚು ಎಂದು ದಿ ಲ್ಯಾನ್ಸೆಟ್ ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಕಂಡುಹಿಡಿದಿದೆ.
ಮಂಗಳವಾರ ಪ್ರಕಟವಾದ ಅಧ್ಯಯನದ ಪ್ರಕಾರ, 2023 ರಲ್ಲಿ ಜಗತ್ತಿನಾದ್ಯಂತ ಸಂಭವಿಸಿದ ಪ್ರತಿ ಹತ್ತು ಸೋಂಕು ಸಂಬಂಧಿತ ಸಾವುಗಳಲ್ಲಿ ಒಂದು ಸಾವು ಬೊಜ್ಜಿನ (Obesity) ಸಮಸ್ಯೆಗೆ ಸಂಬಂಧಿಸಿರಬಹುದು ಎಂದು ತಿಳಿದುಬಂದಿದೆ.
ಫಿನ್ಲ್ಯಾಂಡ್ ಮತ್ತು ಯುಕೆ ಮೂಲದ 5,40,000 ಕ್ಕೂ ಹೆಚ್ಚು ವಯಸ್ಕರ ದತ್ತಾಂಶವನ್ನು ವಿಶ್ಲೇಷಿಸಿದ ಈ ಅಧ್ಯಯನವು, ಆರೋಗ್ಯಕರ ತೂಕ ಹೊಂದಿರುವವರಿಗಿಂತ ಬೊಜ್ಜು ಹೊಂದಿರುವವರು ಸೋಂಕು ರೋಗಗಳಿಂದ ಆಸ್ಪತ್ರೆಗೆ ದಾಖಲಾಗುವ ಅಥವಾ ಮೃತಪಡುವ ಸಾಧ್ಯತೆ ಶೇಕಡಾ 70 ರಷ್ಟು ಹೆಚ್ಚು ಎಂದು ಕಂಡುಹಿಡಿದಿದೆ. ತೀವ್ರತರವಾದ ಬೊಜ್ಜು ಹೊಂದಿರುವವರಲ್ಲಿ ಸೋಂಕಿಗೆ ತುತ್ತಾಗುವ ಅಪಾಯ ಮೂರು ಪಟ್ಟು ಹೆಚ್ಚಿದೆ ಎಂದು ವರದಿ ಹೇಳಿದೆ.
ಬೊಜ್ಜು ಅಂದರೇನು?
ಬೊಜ್ಜು ಎಂಬುದು ವ್ಯಕ್ತಿಯ ದೇಹದಲ್ಲಿ ಅತಿಯಾದ ಕೊಬ್ಬು ಸಂಗ್ರಹವಾಗಿರುವ ವೈದ್ಯಕೀಯ ಸ್ಥಿತಿಯಾಗಿದೆ. ಇದನ್ನು ಸಾಮಾನ್ಯವಾಗಿ ಎತ್ತರ ಮತ್ತು ತೂಕದ ಆಧಾರದ ಮೇಲೆ ಬಾಡಿ ಮಾಸ್ ಇಂಡೆಕ್ಸ್ (BMI) ಮೂಲಕ ಅಳೆಯಲಾಗುತ್ತದೆ. 30 kg/m² ಅಥವಾ ಅದಕ್ಕಿಂತ ಹೆಚ್ಚು BMI ಹೊಂದಿರುವ ವ್ಯಕ್ತಿಯನ್ನು ಬೊಜ್ಜು ಹೊಂದಿರುವವರು ಎಂದು ವರ್ಗೀಕರಿಸಲಾಗುತ್ತದೆ.
ಭಾರತದ ಪರಿಸ್ಥಿತಿ
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5, 2019-21) ಪ್ರಕಾರ, ಭಾರತದ ವಯಸ್ಕರಲ್ಲಿ ಸುಮಾರು ಕಾಲು ಭಾಗದಷ್ಟು ಜನರು ಅತಿಯಾದ ತೂಕ ಅಥವಾ ಬೊಜ್ಜಿನ ಸಮಸ್ಯೆ ಹೊಂದಿದ್ದಾರೆ. ಇದು ಶೇ. 24 ರಷ್ಟು ಮಹಿಳೆಯರು ಮತ್ತು ಶೇ. 23 ರಷ್ಟು ಪುರುಷರ ಮೇಲೆ ಪರಿಣಾಮ ಬೀರಿದೆ.
ಅಧ್ಯಯನದ ಉದ್ದೇಶ ಮತ್ತು ವಿಧಾನ
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಬೊಜ್ಜು ಹೊಂದಿರುವವರಲ್ಲಿ ಅಪಾಯ ಹೆಚ್ಚು ಎಂಬುದು ತಿಳಿದಿತ್ತು. ಆದರೆ ಇತರ ಸಾಮಾನ್ಯ ಸೋಂಕುಗಳಿಗೂ ಇದಕ್ಕೂ ಸಂಬಂಧವಿದೆಯೇ ಎಂಬ ಪುರಾವೆಗಳ ಕೊರತೆಯಿತ್ತು. ಇದನ್ನು ಪತ್ತೆಹಚ್ಚಲು ಸಂಶೋಧಕರು ಫಿನ್ಲ್ಯಾಂಡ್ನ 67,000 ಮತ್ತು ಯುಕೆ ಬಯೋಬ್ಯಾಂಕ್ನ 4,70,000 ವಯಸ್ಕರ ದತ್ತಾಂಶವನ್ನು 13 ರಿಂದ 14 ವರ್ಷಗಳ ಕಾಲ ಅಧ್ಯಯನ ಮಾಡಿದರು.
ಸಂಶೋಧನೆಯ ಪ್ರಮುಖ ಅಂಶಗಳು:
* ಬೊಜ್ಜು ಹೆಚ್ಚಿನ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದರಲ್ಲಿ ಫ್ಲೂ, ಕೋವಿಡ್-19, ನ್ಯುಮೋನಿಯಾ, ಗ್ಯಾಸ್ಟ್ರೋಎಂಟರೈಟಿಸ್, ಮೂತ್ರನಾಳದ ಸೋಂಕು ಮತ್ತು ಉಸಿರಾಟದ ಸೋಂಕುಗಳು ಸೇರಿವೆ.
* ಆದರೆ, ಬೊಜ್ಜು ಎಚ್ಐವಿ (HIV) ಅಥವಾ ಕ್ಷಯರೋಗದ (Tuberculosis) ತೀವ್ರತೆಯನ್ನು ಹೆಚ್ಚಿಸುವುದಿಲ್ಲ ಎಂದು ಸಂಶೋಧಕರು ಗಮನಿಸಿದ್ದಾರೆ.
* ತೂಕ ಹೆಚ್ಚಾದಂತೆ ಸೋಂಕಿನ ಅಪಾಯವೂ ಹೆಚ್ಚುತ್ತದೆ. ಯುಕೆ ಬಯೋಬ್ಯಾಂಕ್ ಗುಂಪಿನಲ್ಲಿ, ಆರೋಗ್ಯಕರ BMI ಹೊಂದಿರುವವರಿಗೆ ವಾರ್ಷಿಕ ಶೇ. 1.1 ರಷ್ಟು ಸೋಂಕಿನ ಅಪಾಯವಿದ್ದರೆ, ಬೊಜ್ಜು ಇರುವವರಲ್ಲಿ ಇದು ಶೇ. 1.8 ರಷ್ಟಿದೆ.
ಜಾಗತಿಕ ಪರಿಣಾಮ
2023 ರಲ್ಲಿ ಜಗತ್ತಿನಾದ್ಯಂತ ಸಂಭವಿಸಿದ 54 ಲಕ್ಷ ಸೋಂಕು ಸಾವುಗಳಲ್ಲಿ ಸುಮಾರು 6 ಲಕ್ಷ (ಶೇ. 10.8) ಸಾವುಗಳಿಗೆ ಬೊಜ್ಜು ಕಾರಣವಾಗಿರಬಹುದು.
* ಅಮೆರಿಕ: ಪ್ರತಿ 4 ಸಾವುಗಳಲ್ಲಿ 1 ಬೊಜ್ಜಿಗೆ ಸಂಬಂಧಿಸಿದೆ.
* ಬ್ರಿಟನ್: ಪ್ರತಿ 6 ಸಾವುಗಳಲ್ಲಿ 1 ಬೊಜ್ಜಿಗೆ ಸಂಬಂಧಿಸಿದೆ.
* ವಿಯೆಟ್ನಾಂ: ಇಲ್ಲಿ ಇದರ ಪ್ರಮಾಣ ಕೇವಲ ಶೇ. 1 ರಷ್ಟಿದೆ.
ಭಾರತಕ್ಕೆ ಇದು ಏಕೆ ಮುಖ್ಯ?
ದೆಹಲಿಯ ಫೋರ್ಟಿಸ್ ಸಿ-ಡಾಕ್ ಆಸ್ಪತ್ರೆಯ ಡಾ. ಅನೂಪ್ ಮಿಶ್ರಾ ಅವರ ಪ್ರಕಾರ, “ಭಾರತೀಯರಲ್ಲಿ ಕಡಿಮೆ ಮಟ್ಟದ ಬೊಜ್ಜು ಇದ್ದರೂ ಮಧುಮೇಹ ಮತ್ತು ಚಯಾಪಚಯ ದೋಷಗಳು ಬೇಗ ಕಾಣಿಸಿಕೊಳ್ಳುತ್ತವೆ, ಇದು ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಭಾರತದ ಹಲವು ಭಾಗಗಳಲ್ಲಿ ಬೊಜ್ಜು, ಮಧುಮೇಹ, ವಾಯುಮಾಲಿನ್ಯ ಮತ್ತು ಜನದಟ್ಟಣೆ ಒಟ್ಟಾಗಿರುವುದರಿಂದ ಸೋಂಕಿನ ಅಪಾಯ ಪಾಶ್ಚಿಮಾತ್ಯ ದೇಶಗಳಿಗಿಂತ ಇಲ್ಲಿ ಹೆಚ್ಚಾಗಿರುವ ಸಾಧ್ಯತೆಯಿದೆ.” ಎಂದಿದ್ದಾರೆ.








