ಲಾಹೋರ್: ಇಸ್ಲಾಮಾಬಾದ್ ಎಕ್ಸ್ ಪ್ರೆಸ್ ನ ಹಲವಾರು ಬೋಗಿಗಳು ಶುಕ್ರವಾರ ಸಂಜೆ ಲಾಹೋರ್ ಬಳಿ ಹಳಿ ತಪ್ಪಿದ ಪರಿಣಾಮ ಕನಿಷ್ಠ 30 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ದೃಢಪಡಿಸಿದ್ದಾರೆ.
ಗಾಯಗೊಂಡ ಮೂವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಲಾಹೋರ್ನಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ರೈಲು ಲಾಹೋರ್ನಿಂದ 50 ಕಿ.ಮೀ ದೂರದಲ್ಲಿರುವ ಶೇಖುಪುರದ ಕಲಾ ಶಾ ಕಾಕು ಎಂಬಲ್ಲಿ ಹಳಿ ತಪ್ಪಿದೆ. ಹತ್ತು ಬೋಗಿಗಳು ಹಳಿ ತಪ್ಪಿದವು.
ರಕ್ಷಣಾ ತಂಡಗಳು ತ್ವರಿತವಾಗಿ ಪ್ರತಿಕ್ರಿಯಿಸಿ, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದವು. ಹಳಿ ತಪ್ಪಿದ ಬೋಗಿಗಳಲ್ಲಿ ಇನ್ನೂ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ.
ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಲಾಹೋರ್ ನಿಲ್ದಾಣದಿಂದ ರೈಲು ಹೊರಟ ಸುಮಾರು ೩೦ ನಿಮಿಷಗಳ ನಂತರ ಹಳಿ ತಪ್ಪಿದೆ.
ರೈಲ್ವೆ ಸಚಿವ ಮುಹಮ್ಮದ್ ಹನೀಫ್ ಅಬ್ಬಾಸಿ ಅವರು ರೈಲ್ವೆ ಸಿಇಒ ಮತ್ತು ವಿಭಾಗೀಯ ಅಧೀಕ್ಷಕರಿಗೆ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಅವರು ನಿರ್ದೇಶನ ನೀಡಿದ್ದು, ಏಳು ದಿನಗಳಲ್ಲಿ ವರದಿ ಸಲ್ಲಿಸಲಿದ್ದಾರೆ.