ನವದೆಹಲಿ: ನೀವು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಡೇಟಿಂಗ್ ಆಪ್‌ಗಳು ಅಥವಾ ಆನ್‌ಲೈನ್ ಗೇಮಿಂಗ್ ಬಳಸುತ್ತಿದ್ದೀರಾ? ಹಾಗಿದ್ದಲ್ಲಿ ಶೀಘ್ರದಲ್ಲೇ ಒಂದು ದೊಡ್ಡ ಬದಲಾವಣೆಯನ್ನು ಎದುರಿಸಲು ಸಿದ್ಧರಾಗಿ. ಬ್ಯಾಂಕ್ ಅಕೌಂಟ್ ತೆರೆಯಲು ಅಥವಾ ಸಿಮ್ ಕಾರ್ಡ್ ಪಡೆಯಲು ಇರುವಂತೆಯೇ, ಇನ್ಮುಂದೆ ಸೋಷಿಯಲ್ ಮೀಡಿಯಾ ಖಾತೆಗಳಿಗೂ KYC (Know Your Customer) ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಸಂಸದೀಯ ಸಮಿತಿಯು ಸರ್ಕಾರದ ಮುಂದಿಟ್ಟಿದೆ.
ಏನಿದು ಹೊಸ ಪ್ರಸ್ತಾಪ?
ಇತ್ತೀಚೆಗೆ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್‌ಲೈನ್ ಕಿರುಕುಳವನ್ನು ತಡೆಗಟ್ಟಲು ಐಟಿ (IT) ಮತ್ತು ಗೃಹ ಸಚಿವಾಲಯಕ್ಕೆ ಸಂಸದೀಯ ಸಮಿತಿಯು ಈ ಮಹತ್ವದ ಸಲಹೆ ನೀಡಿದೆ. ‘ಸೈಬರ್ ಅಪರಾಧ ಮತ್ತು ಮಹಿಳೆಯರ ಸೈಬರ್ ಭದ್ರತೆ’ ಕುರಿತ ವರದಿಯಲ್ಲಿ ಈ ಪ್ರಸ್ತಾಪವನ್ನು ಮಂಡಿಸಲಾಗಿದೆ.
ಲಾಗಿನ್ ಮಾಡಲು ಗುರುತಿನ ಚೀಟಿ: ಹೊಸ ಅಕೌಂಟ್ ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳಿಗೆ ಲಾಗಿನ್ ಆಗಲು ಬಳಕೆದಾರರು ತಮ್ಮ ಅಧಿಕೃತ ಗುರುತಿನ ಚೀಟಿಯ ಮೂಲಕ KYC ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ.
ನಕಲಿ ಖಾತೆಗಳಿಗೆ ಮುಕ್ತಿ: ಬೇರೆಯವರ ಹೆಸರಿನಲ್ಲಿ ಅಕೌಂಟ್ ತೆರೆದು ವಂಚನೆ ಮಾಡುವವರಿಗೆ ಇದು ದೊಡ್ಡ ಹೊಡೆತ ನೀಡಲಿದೆ.
ಸುರಕ್ಷತೆ ಹೆಚ್ಚಳ: ಬಳಕೆದಾರರ ನಿಜವಾದ ಗುರುತು ಲಭ್ಯವಿದ್ದರೆ, ಆನ್‌ಲೈನ್ ಕಿರುಕುಳ ನೀಡುವವರನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ.
ಡೇಟಿಂಗ್ ಮತ್ತು ಗೇಮಿಂಗ್ ಆಪ್‌ಗಳ ಮೇಲೆ ಹದ್ದಿನ ಕಣ್ಣು
ವಿಶೇಷವಾಗಿ ಡೇಟಿಂಗ್ ಮತ್ತು ಆನ್‌ಲೈನ್ ಗೇಮಿಂಗ್ ಆಪ್‌ಗಳಲ್ಲಿ ವಯಸ್ಸಿನ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಮಿತಿಯು ಸೂಚಿಸಿದೆ.
ವಯಸ್ಸಿನ ದೃಢೀಕರಣ (Age Verification): ಸೈನ್-ಅಪ್ ಮಾಡುವಾಗ ಬಳಕೆದಾರರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಮತ್ತು ಕಾಲಕಾಲಕ್ಕೆ ಅದನ್ನು ಮರು-ಪರಿಶೀಲಿಸಬೇಕು.
ಸೈಬರ್ ಸ್ಟಾಕಿಂಗ್ ತಡೆ: ಅನಾಮಧೇಯವಾಗಿ ಅಶ್ಲೀಲ ಸಂದೇಶ ಕಳುಹಿಸುವುದು, ಖಾಸಗಿ ಚಿತ್ರಗಳನ್ನು ಹಂಚಿಕೊಳ್ಳುವುದು ಮತ್ತು ಆನ್‌ಲೈನ್ ಕಿರುಕುಳದಂತಹ ಪ್ರಕರಣಗಳಿಗೆ ಕಡಿವಾಣ ಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ.
“ಒಮ್ಮೆ ಬಳಕೆದಾರರ ನಿಜವಾದ ಗುರುತು ದಾಖಲಾದರೆ, ತಾವು ಪತ್ತೆಯಾಗುತ್ತೇವೆ ಎಂಬ ಭಯದಿಂದ ಸೈಬರ್ ಅಪರಾಧಗಳಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ” ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಕಠಿಣ ಕ್ರಮದ ಎಚ್ಚರಿಕೆ
ಒಂದು ವೇಳೆ ಈ ಪ್ರಸ್ತಾಪ ಜಾರಿಗೆ ಬಂದರೆ, ಹೊಸ ನಿಯಮಗಳನ್ನು ಪಾಲಿಸದ ಸಾಮಾಜಿಕ ಜಾಲತಾಣ ಸಂಸ್ಥೆಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಪದೇ ಪದೇ ನಿಯಮ ಉಲ್ಲಂಘಿಸುವ ಅಕೌಂಟ್‌ಗಳ ಮೇಲೆ ನಿರಂತರ ನಿಗಾ ಇಡಲು ಸೂಚಿಸಲಾಗಿದೆ.








