ಬೆಂಗಳೂರು: ಯುನೆಸ್ಕೋ ಮಾಹಿತಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಜಾಗತಿಕವಾಗಿ 1,600 ಕ್ಕೂ ಹೆಚ್ಚು ಪತ್ರಕರ್ತರು ಹತ್ಯೆಯಾಗಿರುವುದು ನೋವಿನ ಸಂಗತಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ಬೆಂಗಳೂರಿನಲ್ಲಿ ಯುನೆಸ್ಕೊ, ಪತ್ರಕರ್ತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ‘ಸುರಕ್ಷತೆ, ಕಾನೂನು ಸಬಲೀಕರಣ ಮತ್ತು ಭಾರತದಲ್ಲಿ ಪತ್ರಕರ್ತರ ಲಿಂಗ-ಪ್ರತಿಕ್ರಿಯಾತ್ಮಕ ರಕ್ಷಣೆ ಕುರಿತ ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇನ್ನೂ ನೋವಿನ ಸಂಗತಿ ಅಂದರೆ, ಸುಮಾರು ಶೇ.80 ಪ್ರಕರಣಗಳಲ್ಲಿ, ಅಪರಾಧಿಗಳನ್ನು ಎಂದಿಗೂ ನ್ಯಾಯದ ಮುಂದೆ ತರಲಾಗಿಲ್ಲ ಎಂದು ಅವರು ವಿಷಾದಿಸಿದರು.
ಸತ್ಯದ ನೆಲೆಯಲ್ಲಿ ಹೋರಾಟ ಮಾಡುತ್ತಿರುವ ಪ್ರಪಂಚದಾದ್ಯಂತ ಪತ್ರಕರ್ತರು ಇಂದಿಗೂ ಬೆದರಿಕೆಗಳು, ಕಿರುಕುಳ ಮತ್ತು ಜೀವಹಾನಿಯನ್ನು ಎದುರಿಸುತ್ತಲೇ ಇದ್ದಾರೆ ಎಂದರು.
ಭಾರತದಲ್ಲಿಯೂ ಸಹ, ಭ್ರಷ್ಟಾಚಾರ, ಪರಿಸರ ಸಮಸ್ಯೆಗಳು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವರದಿ ಮಾಡುವ ವರದಿಗಾರರು ಬೆದರಿಕೆ ಅಥವಾ ಹಿಂಸೆಯನ್ನು ಎದುರಿಸಿದ ಪ್ರಕರಣಗಳನ್ನು ನಾವು ನೋಡಿದ್ದೇವೆ. ವಾಕ್ ಸ್ವಾತಂತ್ರ್ಯದ ರಕ್ಷಣೆಯಲ್ಲಿ ಧೃಢವಾಗಿ ನಿಂತ ಗೌರಿ ಲಂಕೇಶ್‌ರಂತಹ ಧೈರ್ಯಶಾಲಿ ಪತ್ರಕರ್ತರ ಹತ್ಯೆಯ ಸೇರಿದಂತೆ ಹಲವು ಪ್ರಕರಣಗಳು ಇಂದಿಗೂ ಹಸಿ ಹಸಿಯಾಗಿವೆ. ಅದಕ್ಕಾಗಿ ಸತ್ಯವನ್ನು ಮಾತನಾಡುವವರನ್ನು ರಕ್ಷಿಸುವ ತುರ್ತುಸ್ಥಿತಿ ಇಂದು ಇದೆ ಎಂದು ಹೇಳಿದರು.
ಅಪರಾಧಗಳಿಗೆ ಶಿಕ್ಷೆ ಕೊಡಿಸಬೇಕು. ಪತ್ರಕರ್ತರನ್ನು ರಕ್ಷಿಸುವುದರ ಬಗ್ಗೆ ಮಾತ್ರವಲ್ಲ. ಪ್ರಜಾಪ್ರಭುತ್ವ, ಪಾರದರ್ಶಕತೆ ಮತ್ತು ಸಾರ್ವಜನಿಕರ ತಿಳಿದುಕೊಳ್ಳುವ ಹಕ್ಕನ್ನು ರಕ್ಷಿಸಲು ಎಲ್ಲ ಸುದ್ದಿ ಸಂಸ್ಥೆಗಳು ಮತ್ತು ಪತ್ರಕರ್ತರ ಸಂಘಟನೆಗಳು ಮುಂದಾಗಬೇಕು ಎಂದರು.
ಈ ಕಾರ್ಯಾಗಾರವು ಭಾರತದಾದ್ಯಂತದ ಪತ್ರಕರ್ತರು, ಕಾನೂನು ತಜ್ಞರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದೆ. ಕಾನೂನು ಸಾಕ್ಷರತೆ, ಸೈಬರ್ ಸುರಕ್ಷತೆ ಮತ್ತು ಲಿಂಗ-ಪ್ರತಿಕ್ರಿಯಾತ್ಮಕ ರಕ್ಷಣೆಯಲ್ಲಿ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಎಂದರು.
ದಕ್ಷಿಣ ಏಷ್ಯಾ ಪ್ರಾಂತೀಯ ಯುನೆಸ್ಕೊ ಕಚೇರಿಯ ಮಾಹಿತಿ ಮತ್ತು ಸಂವಹನ ವಿಭಾಗದ ಮುಖ್ಯಸ್ಥೆ ಮಾಲಿ ಹಜಾಜ್, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಗೀತಾರ್ಥ ಪಾಠಕ್, ಪ್ರಧಾನ ಕಾರ್ಯದರ್ಶಿ ಸಬೀನಾ ಇಂದ್ರಜಿತ್, ಒಹೆಚ್ ಸಿಹೆಚ್ ಆರ್ ಮಾನವ ಹಕ್ಕುಗಳ ಅಧಿಕಾರಿ ಐದಾ ಮಾರ್ಟಿಯಸ್, ಕರ್ನಾಟಕ ಸಿಐಡಿ ಕಾನೂನು ಸಲಹೆಗಾರ ಮಹೇಶ್ ವಿ ವೈದ್ಯ, ವೇದಿಕೆಯಲ್ಲಿದ್ದರು.
ಕಾಶ್ಮೀರ, ಮಿಜೊರಾಂ, ತ್ರಿಪುರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಮಣಿಪುರ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ರಾಜಸ್ಥಾನ, ಸೇರಿದಂತೆ ಹಲವು ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ: ಆನಂದಪುರ ವ್ಯಾಪ್ತಿಯ ರೈತರಿಗೆ ಪೊಲೀಸರಿಂದ ಮಹತ್ವದ ಮಾಹಿತಿ, ಈ ಸೂಚನೆ








