ಬೆಂಗಳೂರು: ಕನ್ನಡದಲ್ಲಿ ಡಿಜಿಟಲ್ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ ಎಸ್.ಕೆ. ಶ್ಯಾಮಸುಂದರ್ ಮತ್ತು ಶ್ರವಣಬೆಳಗೊಳ ಬಾಹುಬಲಿ ಮಹಾಮಸ್ತಕಾಭಿಷೇಕ ಸಂಪರ್ಕ ಸೇತುವೆಯಂತಿದ್ದ ಎಸ್.ಎನ್. ಅಶೋಕ್ ಕುಮಾರ್ ಅವರ ಸಾಧನೆಯ ಹೆಜ್ಜೆ ಗುರುತುಗಳನ್ನು ಮರೆಯಲಾಗದು ಎಂದು ಪ್ರಜಾವಾಣಿ ವಿಶ್ರಾಂತ ಸಂಪಾದಕ ಪದ್ಮರಾಜ ದಂಡಾವತಿ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆ.ಯೂ.ಡಬ್ಲ್ಯೂ.ಜೆ) ಹಮ್ಮಿಕೊಂಡಿದ್ದ ಅಗಲಿದ ಹಿರಿಯ ಪತ್ರಕರ್ತರಾದ ಎಸ್.ಕೆ. ಶ್ಯಾಮಸುಂದರ್ ಮತ್ತು ಎಸ್.ಎನ್. ಅಶೋಕ್ ಕುಮಾರ್ ಹಾಗೂ ಉಡುಪಿ ಸಂದೀಪ್ ಸೇರಿದಂತೆ ಅಗಲಿದ ಪತ್ರಕರ್ತರ ನುಡಿ ನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ವಿಭಿನ್ನ ಸಾಧಕ ವ್ಯಕ್ತಿತ್ವದವರು:
ಅಶೋಕ್ ಕುಮಾರ್ ಅವರು, ಗೊಮ್ಮಟವಾಣಿ ಪತ್ರಿಕೆಯ ಸಂಪಾದಕರಾಗಿ ಶ್ರವಣಬೆಳಗೊಳ ಮಠ ಮತ್ತು ನಾಡಿನ ಪತ್ರಕರ್ತರ ಸಮನ್ವಯ ಸೇತುವೆಯಂತೆ ಕಾರ್ಯನಿರ್ವಹಿಸಿದ್ದರು. ಸುಮಾರು ಮೂವತ್ತೈದು ವರ್ಷಗಳ ಅವರ ವೃತ್ತಿಜೀವನ ನಿಜಕ್ಕೂ ಶ್ಲಾಘನೀಯ ಎಂದರು.
ಕನ್ನಡ ಡಿಜಿಟಲ್ ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನು ತಂದ ಕೀರ್ತಿ ಶ್ಯಾಮಸುಂದರ್ ಅವರದು. ನೂರಾರು ಯುವ ಪತ್ರಕರ್ತರಿಗೆ ಮಾರ್ಗದರ್ಶಕರೂ ಆಗಿದ್ದರು ಎಂದರು.
ಡಿಜಿಟಲ್ ಪತ್ರಿಕೋದ್ಯಮ ಸಂಚಲನ:
ಹಿರಿಯ ಪತ್ರಕರ್ತ ಅನಂತ್ ಚಿನಿವಾರ್ ಮಾತನಾಡಿ, ಹಿರಿಯರು ಮತ್ತು ಮಾಹಿತಿ ಕಣಜದಂತಿದ್ದ ಶ್ಯಾಮಸುಂದರ್ ವಿಭಿನ್ನ ವ್ಯಕ್ತಿತ್ವದವರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸಲು ಕಾರಣರಾಗಿದ್ದನ್ನು ಮರೆಯುವಂತಿಲ್ಲ ಎಂದರು.
ಸಹಕಾರ ಮನೋಭಾವ:
ಕನ್ನಡಪ್ರಭ ಪತ್ರಿಕೆಯ (ಸಮನ್ವಯ) ಸಂಪಾದಕರಾದ ಬಿ.ವಿ ಮಲ್ಲಿಕಾರ್ಜುನಯ್ಯ ಅವರು ಮಾತನಾಡಿ, ಶ್ರವಣಬೆಳಗೊಳದಲ್ಲಿ ಪತ್ರಕರ್ತರ ರಾಷ್ಟ್ರೀಯ ಸಮೇಳನವನ್ನು ಏರ್ಪಡಿಸಿದ್ದ ವೇಳೆ ಅಶೋಕ್ ಕುಮಾರ್ ನೀಡಿದ ಸಹಕಾರ ಮತ್ತು ಸೇವೆಯನ್ನು ಸ್ಮರಿಸಿದರು. ಶ್ಯಾಮಸುಂದರ್ ಪತ್ರಕರ್ತರ ವಲಯದಲ್ಲಿ ಪ್ರಭಾವಿ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದವರೆಂದು ಅವರ ಒಡನಾಟವನ್ನು ಸ್ಮರಿಸಿದರು.
ಅಪಾರ ಜ್ಞಾನ ಸಂಪತ್ತಿನ ಶ್ಯಾಮ:
ಹಿರಿಯ ಪತ್ರಕರ್ತರಾದ ಎಚ್.ಕೆ. ಶೇಷಚಂದ್ರಿಕಾ ಅವರು ಮಾತನಾಡಿ, ಮಹಾಮಸ್ತಕಾಭಿಷೇಕ ಸಂಘಟನೆಯ ಸಂದರ್ಭದಲ್ಲಿ ಅಶೋಕ್ ಕುಮಾರ್ ಅವರ ಒಡನಾಟವನ್ನು ಸ್ಮರಿಸಿ ಅವರ ಸೇವೆ ಅನನ್ಯ ಎಂದರು. ಶ್ಯಾಮಸುಂದರ್ ನನ್ನ ಶಿಷ್ಯನಾಗಿ, ಅಪಾರ ಜ್ಞಾನ ಸಂಪತ್ತು ಹೊಂದಿ ಬೆಳೆದ ರೀತಿ ನಿಬ್ಬೆರಗಾಗುವಂತಾದ್ದು ಎಂದರು.
ಅಶೋಕ್ ಕುಮಾರ್ ಸೇವೆ ಅನನ್ಯ:
ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಪರ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಮದನಗೌಡ ಮಾತನಾಡಿ, ಗೊಮ್ಮಟನ ಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ ಅಶೋಕ್‌ಕುಮಾರ್ ಅವರ ಸೇವೆ ಸ್ಮರಣೀಯ ಎಂದು ಗುಣಗಾನ ಮಾಡಿದರು.
ಸ್ಮರಣೀಯ ಕೊಡುಗೆ:
ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಅಗಲಿದ ಪತ್ರಕರ್ತರ ಸಂಸ್ಮರಣೆಯು ಸಂಘದ ಕರ್ತವ್ಯವಾಗಿದ್ದು, ಅವರೆಲ್ಲರ ಆದರ್ಶ ಮತ್ತು ಸಾಧನೆ ಇಂದಿನ ಪತ್ರಕರ್ತರಿಗೆ ತಿಳಿಯಬೇಕೆಂಬ ಸದುದ್ದೇಶದಿಂದ ಕೂಡಿದೆ. ಶ್ಯಾಮಸುಂದರ ಅವರ ಮತ್ತು ಅಶೋಕ್ ಕುಮಾರ್ ಅವರು ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು.
ಪೆಹಲ್ಗಾಮದಲ್ಲಿ ಮಡಿದವರಿಗೆ ಶ್ರದ್ದಾಂಜಲಿ:
ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಪತ್ರಕರ್ತರಿಗೆ ಮತ್ತು ಇತ್ತೀಚೆಗೆ ಕಾಶ್ಮೀರದ ಪವಲ್ಗಾಮದಲ್ಲಿ ಮಡಿದವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಖಜಾಂಚಿ ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ರಾಜ್ಯ ಸಮಿತಿ ಸದಸ್ಯ ಕೆ.ಆರ್. ದೇವರಾಜ್, ಅಶೋಕ್ ಕುಮಾರ್ ಅವರ ಪುತ್ರ ಸಚಿನ್ ಮತ್ತು ಸೊಸೆ ಅರ್ಚನ ಸೇರಿದಂತೆ ಹಲವರು ಹಾಜರಿದ್ದರು.
ಮಾಧ್ಯಮ ಸಲಹೆಗಾರರಾದ ‘ಕೆ.ವಿ ಪ್ರಭಾಕರ್’ಗೆ ‘KSDMF’ನಿಂದ ಅಭಿನಂದನೆ: ಶೀಘ್ರದಲ್ಲೇ ರಾಜ್ಯಮಟ್ಟದ ಸಮ್ಮೇಳನ