ಮಂಡ್ಯ : ಕುವೆಂಪು ಅವರು ಮಾನವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು, ಅವರ ಸ್ಮರಣೆ ಅಗತ್ಯವಾಗಿದೆ ಎಂದು ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಸೋಮವಾರ ಹೇಳಿದರು.
ಮದ್ದೂರು ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಮಾನವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುವೆಂಪು ಅವರು, ಮನುಜ ಮತ ವಿಶ್ವಪಥ ಎಂದು ಸಾರಿ ಮಾನವ ಸಮಾಜಕ್ಕೆ ಅನೇಕ ಸಂದೇಶ ನೀಡುವ ಮೂಲಕ ಜಾತಿ, ಮತ, ಪಂಥಕ್ಕೆ ಆಧ್ಯತೆ ನೀಡದೇ ಮಾನವೀಯ ಧರ್ಮ ಮೇಲು ಎಂದು ಸಾರಿದರು ಹಾಗಾಗಿ ಅವರನ್ನು ವಿಶ್ವಮಾನವ ಎಂದು ಹೇಳಲಾಗುತ್ತದೆ ಎಂದರು.
ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕುವೆಂಪು ಅವರು ರವೀಂದ್ರನಾಥ ಟ್ಯಾಗೂರ್‌ರಂತೆ ರಾಷ್ಟ್ರಗೀತೆ ಮಾದರಿಯಲ್ಲಿ ನಾಡಗೀತೆ ಹಾಗೂ ರೈತಗೀತೆಯಂಥ ಸಾಕಷ್ಟು ಗೀತೆಗಳನ್ನು ನೀಡಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಇಂಥ ಮಹಾನೀಯರ ಆದರ್ಶಗಳನ್ನು ಜೀವಂತವಾಗಿರಿಸುವ ಕೆಲಸವನ್ನು ನಾವೆಲ್ಲರು ಮಾಡಬೇಕಿದೆ.
ಕುವೆಂಪು ಅವರು ಅಧ್ಯಾಪಕರಾಗಿ, ಪ್ರಾಚಾರ್ಯ, ಶಿಕ್ಷಣ ತಜ್ಞರಾಗಿಯೂ ಶ್ರೇಷ್ಠ ಕೆಲಸ ಮಾಡಿದ್ದಾರೆ. ಕನ್ನಡ ಭಾಷೆಗೆ ಶಕ್ತಿ ನೀಡಿದ್ದಾರೆ. ಶಬ್ದಗಳಲ್ಲಿ ಅವರ ವರ್ಣನೆ ಅಸಾಧ್ಯ. ಜಗದ ಕವಿ, ಯುಗದ ಕವಿ ಎಂದೇ ಜನಮಾನಸದಲ್ಲಿ ಪ್ರಖ್ಯಾತಿಯಾದ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶಗಳು ಇಂದಿಗೂ ಪ್ರಸ್ತುತ, ಅವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮ ಕುರಿತು ಸರ್ಕಾರಿ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಲತಾ ಅವರು ಪ್ರಧಾನ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಬಿಇಓ ಧನಂಜಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವಿಶಾಲಾಕ್ಷಿ, ಗ್ರೇಡ್ 2 ತಹಶೀಲ್ದಾರ್ ಸೋಮಶೇಖರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ HD ರೇವಣ್ಣಗೆ ಬಿಗ್ ರಿಲೀಫ್; ಪ್ರಕರಣ ರದ್ದುಗೊಳಿಸಿ ಕೋರ್ಟ್
ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut








