ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಸ್ಟ್ಯಾಂಡ್ ಅಪ್ ಹಾಸ್ಯನಟ ಕುನಾಲ್ ಕಮ್ರಾ ವಿರುದ್ಧ ಖಾರ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಒಂದು ದೂರು ಜಲ್ಗಾಂವ್ ನಗರದ ಮೇಯರ್ ಸಲ್ಲಿಸಿದ್ದರೆ, ಇತರ ಎರಡು ದೂರುಗಳು ನಾಸಿಕ್ನ ಹೋಟೆಲ್ ಉದ್ಯಮಿಯಿಂದ ಬಂದಿವೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಖಾರ್ ಪೊಲೀಸರು ಕಮ್ರಾ ಅವರನ್ನು ಎರಡು ಬಾರಿ ವಿಚಾರಣೆಗೆ ಕರೆದಿದ್ದಾರೆ, ಆದರೆ ಅವರು ಇನ್ನೂ ವಿಚಾರಣೆಗೆ ಹಾಜರಾಗಿಲ್ಲ.
ಇದಕ್ಕೂ ಮುನ್ನ ಮದ್ರಾಸ್ ಹೈಕೋರ್ಟ್ ಶುಕ್ರವಾರ ಕುನಾಲ್ ಕಮ್ರಾ ವಿರುದ್ಧ ದಾಖಲಾದ ಅನೇಕ ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ನ್ಯಾಯಮೂರ್ತಿ ಸುಂದರ್ ಮೋಹನ್ ಅವರು ಷರತ್ತುಗಳೊಂದಿಗೆ ಏಪ್ರಿಲ್ ೭ ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದರು.
ತನ್ನ ಇತ್ತೀಚಿನ ವಿಡಂಬನಾತ್ಮಕ ಹೇಳಿಕೆಗಳ ನಂತರ ತನಗೆ ಅನೇಕ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿ ಕುನಾಲ್ ಕಮ್ರಾ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು.
ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಮಾರ್ಚ್ 31 ರಂದು ಖಾರ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಮಾರ್ಚ್ 27 ರಂದು ಮುಂಬೈ ಪೊಲೀಸರು ಹಾಸ್ಯನಟನಿಗೆ ಸೂಚಿಸಿದ್ದರು. ಖಾರ್ ಪೊಲೀಸ್ ಠಾಣೆಯಲ್ಲಿ ಶಿವಸೇನೆ ಶಾಸಕ ಮುರ್ಜಿ ಪಟೇಲ್ ಸಲ್ಲಿಸಿದ ಪ್ರಕರಣದಲ್ಲಿ ಕಮ್ರಾ ಅವರಿಗೆ ನೀಡಲಾದ ಮೂರನೇ ಸಮನ್ಸ್ ಇದಾಗಿದೆ. ಮೊದಲ ಎರಡು ಸಮನ್ಸ್ ಗಳಲ್ಲಿ ಅವರು ಪೊಲೀಸರ ಮುಂದೆ ಹಾಜರಾಗಲು ವಿಫಲರಾಗಿದ್ದಾರೆ.