ನವದೆಹಲಿ: ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರು ಕೇವಲ ಮಾತನಾಡುವ ಬದಲು ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರದಿಂದ ಕರ್ನಾಟಕಕ್ಕೆ ಅನುದಾನ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕುಮಾರಸ್ವಾಮಿ ಅವರು ಸಾಕಷ್ಟು ಖಾಲಿ ಮಾತುಗಳನ್ನಾಡುತ್ತಿದ್ದಾರೆ, ಮೊದಲು ಅವರಿಗೆ ಹಣ ಸಿಗಲಿ” ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆ ಕುರಿತು ಮಾತನಾಡಿದ ಅವರು, ಒಂದೆರಡು ದಿನಗಳಲ್ಲಿ ಜಾಗತಿಕ ಟೆಂಡರ್ ಕರೆಯಲಾಗುವುದು. ಟೋಲ್ ಇಲ್ಲದೆ ಈ ಯೋಜನೆಯನ್ನು ಮಾಡಲು ಸಾಧ್ಯವಿಲ್ಲ. ನಗರದ ವಿಮಾನ ನಿಲ್ದಾಣ ರಸ್ತೆ ಮತ್ತು ನೈಸ್ ರಸ್ತೆಯಲ್ಲೂ ಟೋಲ್ ಇದೆ.
ರಾಜ್ಯದ ಆರು ನೀರಾವರಿ ಯೋಜನೆಗಳಿಗೆ 11,122.76 ಕೋಟಿ ರೂ.ಗಳ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇನೆ ಎಂದು ಜಲಸಂಪನ್ಮೂಲ ಖಾತೆಯನ್ನೂ ಹೊಂದಿರುವ ಡಿಸಿಎಂ ಹೇಳಿದರು.
“ಒಂದು ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ನಾವು ತಿಳಿದುಕೊಂಡಿದ್ದೇವೆ, ಆದರೆ ನಾವು ಇನ್ನೂ ಅಧಿಕೃತ ದೃಢೀಕರಣವನ್ನು ಸ್ವೀಕರಿಸಿಲ್ಲ” ಎಂದು ಅವರು ಹೇಳಿದರು.
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಶೇ.25ರಷ್ಟು ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ. ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ ಯೋಜನೆಗೆ ಕೆಲವು ತೊಡಕುಗಳು ಇದ್ದವು. ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಕೇಂದ್ರ ಪರಿಸರ ಸಚಿವರು ಭರವಸೆ ನೀಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.