ತುಮಕೂರು : ಮಂಡ್ಯದ ಕೆರಗೋಡು ಗ್ರಾಮದಲ್ಲಿ ಭಗವಾಧ್ವಜ ಹಾರಿಸಿದ್ದರ ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಪ್ರತಿಭಟನೆ ಮಾಡಲು ಹೋಗುತ್ತಾರೆ ಎಂದರೆ ಇದು ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಹಾಗೂ ಪ್ರಚೋದನೆ ನೀಡಲು ಮಾಡುತ್ತಿರುವ ರಾಜಕೀಯ ಕುತಂತ್ರ. ಇದರಲ್ಲಿ ಸರ್ಕಾರದ ವೈಫಲ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸುತ್ತೇವೆ, ಯಾವುದೇ ಧರ್ಮದ ಧ್ವಜವನ್ನು ಹಾಕುವುದಿಲ್ಲ ಎಂದು ಹೇಳಿ ಅದನ್ನು ಉಲ್ಲಂಘಿಸಿ ಭಗವಾಧ್ವಜವನ್ನು ಹಾರಿಸಿದ್ದಾರೆ. ಅವರೇ ಬರೆದುಕೊಟ್ಟ ಮುಚ್ಚಳಿಕೆಗೆ ಬರೆದುಕೊಟ್ಟಿದ್ದರ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದರು.
ಇಬ್ಬರಿಗೆ ಲಾಠಿ ಚಾರ್ಜ್ ವೇಳೆ ಗಾಯವಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಪೋಲಿಸರಿಗೆ ಹೊಡೆದಿದ್ದಾರೆ ಎಂಬ ಮಾಹಿತಿ ಇದೆ ಪೋಲಿಸಿನವರಿಗೆ ಹೊಡೆದರೆ ಏನು ಮಾಡುತ್ತಾರೆ ಎಂದರು.
ಧ್ವಜದ ವಿಚಾರದಲ್ಲಿ ನಕಲಿ ದಾಖಲೆ ಸೃಷಿಯಾಗಿದ್ದು, ಘಟನೆಗೆ ಜಿಲ್ಲಾಧಿಕಾರಿ ಕಾರಣ, ಅವರು ಅಮಾನತು ಆಗುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿಯವರು ಹೇಳಿರುವ ಬಗ್ಗೆ ಮಾತನಾಡಿ ಕುಮಾರಸ್ವಾಮಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನು ಗೊತ್ತಿದೆ. ಅವರು ಹೇಳಿದ್ದನ್ನು ಈವರೆಗೆ ಸಾಬೀತು ಮಾಡಿದ್ದಾರೆಯೇ? ಸುಮ್ಮನೆ ಆರೋಪ ಮಾಡಬೇಕೆಂದು ಮಾಡುತ್ತಿದ್ದಾರೆ ಎಂದರು. ಕಾನೂನನ್ನು ಯಾರೇ ಕೈಗೆತ್ತಿಕೊಂಡರೆ ಸರ್ಕಾರ ಅದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರರು
ಹೆಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಕೈಜೋಡಿಸಿರುವುದರಿಂದ ಈಗ ಬಿಜೆಪಿಯ ವಕ್ತಾರರಾಗಿದ್ದಾರೆ. ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದಾರೆ. ತಮ್ಮ ಪಕ್ಷದ ಹೆಸರಿನ ಜೊತೆಗೆ ಜಾತ್ಯಾತೀತ ಎಂದು ಇಟ್ಟುಕೊಂಡಿದ್ದಾರೆ. ಜಾತ್ಯಾತೀತ ಎಂದರೆ ಏನು? ಬಿಜೆಪಿ ಅವರೊಂದಿಗೆ ಸೇರಿಕೊಂಡರೆ ಇವರನ್ನು ಏನೆಂದು ಕರೆಯಬೇಕು ಎಂದರು.
ಮೊದಲು ನಡವಳಿಕೆ ಕಲಿತು ಆಮೇಲೆ ಬೇರೆಯವರಿಗೆ ಹೇಳಲಿ
ಹೆಸರಿನಲ್ಲಿ ರಾಮ ಇದ್ದರೆ ಸಾಲದು ನಡವಳಿಕೆ ಸರಿಯಾಗಿರಬೇಕು ಎಂದಿರುವ ಕುಮಾರಸ್ವಾಮಿಯವರು ಮೊದಲು ನಡವಳಿಕೆ ಕಲಿತು ಆಮೇಲೆ ಬೇರೆಯವರಿಗೆ ಹೇಳಲಿ ಎಂದು ತಿರುಗೇಟು ನೀಡಿದರು.
ಕೋಮುವಿಷಯಗಳನ್ನು ಮುನ್ನೆಲೆಗೆ ತರುತ್ತಾರೆ
ನಿನ್ನೆ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶದಿಂದಾಗಿ ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಹುಟ್ಟಿದೆ. ಅದಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ. ಯಾವುದೇ ವಿಷಯವಿಲ್ಲದೇ ಇಲ್ಲದಲ್ಲಿ ಅಂಥ ಕಡೆ ಕೋಮುವಿಷಯಗಳನ್ನು ಮುಂದಕ್ಕೆ ತರುತ್ತಾರೆ ಎಂದರು.
ಸರ್ಕಾರ ಹೇಗೆ ಬೀಳುತ್ತದೆ
ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಸರ್ಕಾರ ಬಿದ್ದುಹೋಗಲಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ನಾವು 136 ಜನ ಗೆದ್ದಿದ್ದೇವೆ ಶೇ 43% ರಷ್ಟು ಮತಗಳು ನಮಗೆ ಬಂದಿವೆ ಹೇಗೆ ಬಿದ್ದುಹೋಗುತ್ತದೆ ಎಂದು ಮರುಪ್ರಶ್ನಿಸಿದರು.
ತುಮಕೂರಿನವರೆಗೆ ಮೆಟ್ರೋ ವಿಸ್ತರಣೆಯಾಗಬೇಕೆಂದು ಗೃಹ ಸಚಿವ ಜಿ.ಪರಮೇಶ್ವರ್ ಬೇಡಿಕೆ ಇಟ್ಟುರುವ ಬಗ್ಗೆ ಪ್ರತಿಕ್ರಿಯೆ ನೀಡಿ. ಅದನ್ನು ಸಚಿವ ಸಂಪುಟದಲ್ಲಿಟ್ಟು ತೀರ್ಮಾನಿಸಲಾಗುವುದು ಎಂದರು.
‘ತುಮಕೂರ’ನ್ನು 2ನೇ ಬೆಂಗಳೂರಾಗಿ ಅಭಿವೃದ್ಧಿ ಮಾಡಲು ಸರ್ಕಾರ ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್
BREAKING : ‘SIMI’ಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ : ಸಂಘಟನೆ ಮೇಲಿನ ‘ನಿಷೇಧ’ ಮತ್ತೆ ‘5 ವರ್ಷ’ ವಿಸ್ತರಣೆ