ಚನ್ನಪಟ್ಟಣ: ಜೆಡಿಎಸ್ ಪಕ್ಷದವರಿಗೆ ಚನ್ನಪಟ್ಟಣ ಉಪಚುನಾವಣೆ ಅರಗಿಸಿಕೊಲ್ಲಲು ಆಗುತ್ತಿಲ್ಲ, ಆದ್ದರಿಂದ ಕುಮಾರಸ್ವಾಮಿ ಮತ್ತು ದೇವೇಗೌಡರು ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿ ಕಾರಿದರು.
ಚನ್ನಪಟ್ಟಣದ ಹೊರವಲಯದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜೆಡಿಎಸ್ ನ ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಚನ್ನಪಟ್ಟಣ ಕ್ಷೇತ್ರಕ್ಕೆ ತಾವು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಲು ಏನು ಇಲ್ಲ, ಅವರು ಚನ್ನಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಹಾಗಾಗಿ ಅಭ್ಯರ್ಥಿ ಯೋಗೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ವೈಯಕ್ತಿಕ ಆರೋಪವನ್ನೇ ಚುನಾವಣೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ತಾವುಗಳು ರಾಮನಗರ, ಚನ್ನಪಟ್ಟಣಕ್ಕೆ ಆಯ್ಕೆಯಾಗಿ ಅವರು ಕ್ಷೇತ್ರದ ಚುನಾಯಿತರಾಗಿ, ಇಲ್ಲಿಯ ಅಭಿವೃದ್ಧಿಯ ಬಗ್ಗೆ ಮಾತನಾಡಲಿ, ಅದನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡುವುದೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ ಎಂದರು.
ದೇವೇಗೌಡರು ದೇಶದ ಪ್ರಧಾನಿಯಾಗಿದ್ದವರು, ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಕುಮಾರಸ್ವಾಮಿ ಅವರು ಸಹ ಮಾಜಿ ಮುಖ್ಯಮಂತ್ರಿಗಳಾಗಿದ್ದು ಮಾತನಾಡುವ ರೀತಿಯನ್ನ ತಿಳಿಯಬೇಕು. ಮಾತನಾಡುವ ಭರದಲ್ಲಿ ಬಾಯಿಗೆ ಬಂದದ್ದನ್ನು ಮಾತನಾಡಬಾರದು ಎಂದು ಸಲಹೆ ನೀಡಿದರು.
||ಐದು ವರ್ಷಗಳು ಮತದಾರರ ಬಳಿ ಹೋಗದಂತೆ ಹೆಚ್ಡಿಕೆ ಹೇಳಿಕೆ||
||ಹಳೇ ಮೈಸೂರು ಭಾಗಕ್ಕೆ ಅಪಮಾನ||
ಮಾಜಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಚುನಾವಣೆ ಬಗ್ಗೆ, ಮತದಾರರ ಬಗ್ಗೆ ಇಷ್ಟು ಕೀಳಾಗಿ ಮಾತನಾಡಬಾರದಿತ್ತು. ಪವಿತ್ರ ವಿಧಾನಸಭೆಯಲ್ಲಿ ಐದು ವರ್ಷ ಜನರ ಬಳಿಗೆ ಹೋಗಬಾರದು, ಕೊನೆಯ 8-10 ದಿನ ಹೋಗಬೇಕು ಎಂದು ಹೇಳುತ್ತಾರೆ. ಇದು ರಾಜಕಾರಣಿಗಳಿಗೆ ಮಾಡುವ ಅಪಮಾನ. ಇವರ ಮಾತು ಕೇಳಿ ಸಾರ್ವಜನಿಕ ವಲಯದಲ್ಲಿ ಹಳೇ ಮೈಸೂರು ಭಾಗದ ಜನರ ಬಗ್ಗೆ ಯಾವ ಅಭಿಪ್ರಾಯ ಮೂಡುಲಿದೆ ತಿಳಿಯಬೇಕು ಎಂದು ಆತಂಕದ ಮಾತುಗಳನ್ನಾಡಿದರು.
ಉಪಚುನಾವಣೆ ಎದುರಾಗುತಿದ್ದಂತೆ ಯೋಗೇಶ್ವರ್ ಅವರನ್ನು ಹೀನಾಯವಾಗಿ ನಡೆಸಿಕೊಂಡರು. ಯೋಗೇಶ್ವರ್ ಜೊತೆ ಟಿಕೆಟ್ ಸಂಬಂಧ ಕುಳಿತು ಮಾತನಾಡದೆ ಅವರು ಕಾಂಗ್ರೆಸ್ ಪಕ್ಷ ಸೇರಿಕೊಳ್ಳುತ್ತಿದ್ದಂತೆ ಅವರು ಹೋಡಿಹೋದರು ಎನ್ನುತ್ತಾರೆ. ಯೋಗೇಶ್ವರ್ ಅವರನ್ನು ನಡೆಸಿಕೊಂಡ ರೀತಿ ಸರಿಯೇ ಎಂದು ಪ್ರಶ್ನಿಸಿದರು.
||ಡಿಕೆಎಸ್-ಯೋಗೇಶ್ವರ್ ಒಂದಾದರೆ ಕುಮಾರಸ್ವಾಮಿಗೆ ಚನ್ನಪಟ್ಟಣ ಅಭಿವೃದ್ಧಿಯಾಗುವ ಆತಂಕ||
ಯೋಗೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಜೊತೆ ಸೇರೆದರೆ ಚನ್ನಪಟ್ಟಣಕ್ಕೆ ಉಪಯೋಗ ಆಗಲಿದೆ ಎಂದು ಕುಮಾರಸ್ವಾಮಿಗೆ ಆತಂಕವಿದೆ, ಚನ್ನಪಟ್ಟಣ ಅಭಿವೃದ್ಧಿಯಿಂದ ದೂರ ಮಾಡುವ ಉದ್ದೇಶದಿಂದ ರಾಜಕಾರಣ ಮಾಡಿ ವೈಯಕ್ತಿಕವಾಗಿ ಮಾತುಗಳನ್ನು ಆಡುತಿದ್ದಾರೆ ಎಂದರು.
ರಾಜ್ಯದ ಜನತೆಗೆ, ನೀರಾವರಿಗೆ ಕಿಂಚಿತ್ತು ಕೊಡುಗೆ ನೀಡದ ಅವರು ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ, ಇತ್ತೀಚೆಗೆ ತೋರೆಕಾಡನಹಳ್ಳಿಯಲ್ಲಿ ನೂರಾರು ಕುಟುಂಬಕ್ಕೆ ನೀರೋದಗಿಸಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯವನ್ನು ಸಹಿಸಲಾಗದೆ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ ಎಂದು ಕಿಡಿ ಕಾರಿದರು.
||ಸರ್ಕಾರ ತೆಗೆಯುವ ಮಾತಾಡುವುದು ದೇವೇಗೌಡರಿಗೆ ಅಭ್ಯಾಸ||
ಯಾವ ಸರ್ಕಾರವು ಪೂರ್ಣವಾಧಿಗೆ ಇರುವುದಿಲ್ಲ ಎನ್ನುತ್ತಾರೆ. ಈಗ ಕಾಂಗ್ರೆಸ್ ಸರ್ಕಾರ ತೆಗೆಯುವ ಮಾತು ಆಡುತ್ತಾರೆ, ಪೂರ್ಣವಧಿ ಅಧಿಕಾರ ಪಡೆಯದ ಅವರಿಗೆ ಸರ್ಕಾರ ಬೀಳಿಸುವಂತೆ ಮಾತನಾಡುವುದು ಅಭ್ಯಾಸ ಎಂದು ವ್ಯಂಗ್ಯ ಮಾಡಿದರು.
ಈಗ ಹಾಸನದಲ್ಲಿ ಏನಾಗಿದೆ, ಹಾಸನದಲ್ಲಿ ದೇವೇಗೌಡರನ್ನು 4 ತಿಂಗಳು ಯಾರು ಕೂರಿಸಿದ್ದು, ಇಂದು 350ರಿಂದ 400 ಒಕ್ಕಲಿಗ ಕುಟುಂಬಗಳು ಬೀದಿಗೆ ಬಂದಿವೆ. ಈ ಸಂಬಂಧ ದೇವೇಗೌಡರು ಬೀದಿಗೆ ಇಳಿದು ಯಾಕೆ ಹೋರಾಟ ಮಾಡಲಿಲ್ಲ ಎಂದು ಪ್ರಶ್ನಿಸಿದ ಸಚಿವರು. ನೊಂದ ಕುಟುಂಬಗಳಿಗೆ ಮೊಮ್ಮಕ್ಕಳಿಂದ ತಪ್ಪಾಗಿದೆ ಎಂದು ಕನಿಷ್ಠ ಸಾಂತ್ವನ ಮಾಡದೆ ಮತ್ತೊಬ್ಬ ಮೊಮ್ಮಗನ ಪರ ಚುನಾವಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಚುನಾವಣೆ ಬಂದಾಗ ಕುಮಾರಸ್ವಾಮಿ ಕಲೆಕ್ಷನ್ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದರಲ್ಲಿ ಕುಮಾರಸ್ವಾಮಿ ಚಾಣಾಕ್ಷರು, ಇದನ್ನು ನಮ್ಮಿಂದ ಮಾಡಲು ಬರುವುದಿಲ್ಲ, ಅದನ್ನೂ ನಾನು ಅವರಿಂದ ಕಲಿಯಲು ಇಷ್ಟವಿಲ್ಲ. ಕಾಂಗ್ರೆಸ್ ಗೆ ಬಂದು ಪಾರದೇ ಎಂದು ಹೇಳಿದರು.
||ತಾವು ಗೆದ್ದ ಕ್ಷೇತ್ರಕ್ಕೆ ಕೊಡುಗೆ ನೀಡದ ಹೆಚ್ಡಿಡಿ, ಹೆಚ್ಡಿಕೆ||
ಚನ್ನಪಟ್ಟಣದಲ್ಲಿ ನಿಂತು ದೇವೇಗೌಡರು ಪ್ರಧಾನಿಯಾದರು, ಪ್ರಧಾನಿಯಾಗಿ ಹಾಸನದಲ್ಲಿ ಸೋತರು, ಮತ್ತೆ ಡಿ.ಕೆ.ಶಿವಕುಮಾರ್ ವಿರುದ್ಧ ಗೆದ್ದರು, ಅವರ ಮಗ ಕುಮಾರಸ್ವಾಮಿ ರಾಮನಗರದಲ್ಲಿ ಗೆದ್ದು ಮುಖ್ಯಮಂತ್ರಿಯಾದರು, ಚನ್ನಪಟ್ಟಣದಲ್ಲಿ ಗೆದ್ದು ಅವರು ತಾವು ಗೆದ್ದ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ದೂರಿದರು.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಸಚಿವರಾದ ರಾಮಲಿಂಗರೆಡ್ಡಿ, ವೆಂಕಟೇಶ್, ಜಮೀರ್ ಅಹಮದ್, ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಶಾಸಕರುಗಳಾದ ನರೇಂದ್ರಸ್ವಾಮಿ,ರವಿಕುಮಾರ್ ಗೌಡ,ಬಾಲಕೃಷ್ಣ, ಚಲನಚಿತ್ರ ನಟ ಸಾಧುಕೋಕಿಲ ಸೇರಿದಂತೆ ಇತರ ಶಾಸಕರು, ನಾಯಕರು, ಮುಖಂಡರು ಇದ್ದರು.