ರಾಮನಗರ : “ಮುಖ್ಯಮಂತ್ರಿಯಾಗಿದ್ದರೂ ಕುಮಾರಣ್ಣ ನಿಮ್ಮ ಸಮಸ್ಯೆ ಬಗೆಹರಿಸಲಿಲ್ಲ. ತಾಜ್ ವೆಸ್ಟ್ ಎಂಡ್ ಹೊಟೇಲ್ ಒಳಗೆ ದಳದ ಕಾರ್ಯಕರ್ತರನ್ನು ಬಿಡದ ಕಾರಣ, ನಿಮ್ಮ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರ ಕೋಡಂಬಳ್ಳಿ, ಅಕ್ಕೂರು, ಅರಲಾಳುಸಂದ್ರ, ಮೆಣಸಿಗನಹಳ್ಳಿ ಗ್ರಾಮದಲ್ಲಿ ಸುರೇಶ್ ಅವರು ಮಂಗಳವಾರ ಪ್ರಚಾರ ಮಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು;
ಚನ್ನಪಟ್ಟಣ ಕ್ಷೇತ್ರದ ಜನರ ಆಶೀರ್ವಾದದಿಂದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದರು. ಮುಖ್ಯಮಂತ್ರಿ ಆದವರಿಗೆ ತಾಲ್ಲೂಕಿನ ಅಭಿವೃದ್ಧಿ ಮಾಡಲು ಎಷ್ಟು ಸಮಯ ಬೇಕು?
ವಿರೂಪಾಕ್ಷಿಪುರ, ಅಕ್ಕೂರು ಹೋಬಳಿಯ ಸಮಸ್ಯೆ ಏನು? ಈ ಭಾಗದ ರೈತರ ಸಮಸ್ಯೆ ಏನು ಎಂದು ಗೊತ್ತಿದ್ದರೆ ಅವುಗಳನ್ನು ಬಗೆಹರಿಸಲು ಹತ್ತರಿಂದ ಹದಿನೈದು ದಿನಗಳು ಸಾಕು.
ನೀವು ಮುಖ್ಯಮಂತ್ರಿ ಮಾಡಿದರೂ ಕುಮಾರಸ್ವಾಮಿ ಅವರಾಗಲಿ ಅಥವಾ ಜೆಡಿಎಸ್ ಮುಖಂಡರಾಗಲಿ ನಿಮ್ಮ ಊರಿನ ಋಣ ತೀರಿಸುವ ಕೆಲಸ ಮಾಡಲಿಲ್ಲ. ನೀವು ಅವರನ್ನು ಮುಖ್ಯಮಂತ್ರಿಗಿಂತ ಇನ್ನೇನು ಮಾಡಲು ಸಾಧ್ಯ? ನಿಮ್ಮ ಸಮಸ್ಯೆ ಬಗೆಹರಿಸಲು ಅವರಿಗೆ ಶಕ್ತಿ ಇರಲಿಲ್ಲವೇ? ಈ ಭಾಗದ ಮುಖಂಡರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಆಗುತ್ತಿರಲಿಲ್ಲವೇ? ಅಥವಾ ನಿಮ್ಮನ್ನು ಅವರಿದ್ದ ವೆಸ್ಟ್ ಎಂಡ್ ಹೋಟೆಲ್ ಒಳಗೆ ಬಿಡುತ್ತಿರಲಿಲ್ಲವೇ?
ಜೆಡಿಎಸ್ ಕಾರ್ಯಕರ್ತರನ್ನು ವೆಸ್ಟ್ ಎಂಡ್ ಹೋಟೆಲ್ ಒಳಗೆ ಬಿಡುತ್ತಿರಲಿಲ್ಲವಂತೆ. ಹೀಗಾಗಿ ನಿಮ್ಮ ಸಮಸ್ಯೆ ಬಗೆಹರಿಸಿ ಕೆಲಸ ಮಾಡಲು ಆಗಲಿಲ್ಲವಂತೆ. ಈಗ ಮಗನನ್ನು ಕರೆತಂದು ಕೆಲಸ ಮಾಡುತ್ತೇವೆ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಮುಖ್ಯಮಂತ್ರಿ ಆದಾಗಲೇ ನಿಮ್ಮ ಕಷ್ಟ ಕೇಳದವರು, ಕೋವಿಡ್ ಸಮಯದಲ್ಲಿ ನಿಮ್ಮ ನೋವಿಗೆ ಸ್ಪಂದಿಸದವರು, ಈಗ ಮಗ, ಮೊಮ್ಮಗನಿಗೆ ಈ ಜನರಿಂದ ಮತ ಹಾಕಿಸಿಕೊಳ್ಳಲು ಬಂದಿದ್ದಾರೆ. ಹಣ ಕೊಟ್ಟು ಮತ ಹಾಕಿಸಿಕೊಳ್ಳುವುದಾಗಿ ಹೇಳಿದ್ದಾರಂತೆ. ಮತದಾರರು ಎರಡು ಬಾರಿ ಮತ ಹಾಕಿದಾಗ ಹಣ ಪಡೆದಿದ್ದರೆ? ಕುಮಾರಸ್ವಾಮಿ ಅವರನ್ನು ನಿಮ್ಮವರು ಎಂದು ಭಾವಿಸಿ ಮನೆ ಮಗನಾದ ಯೋಗೇಶ್ವರ್ ಮರೆತು ಮತ ಹಾಕಿದಿರಿ. ಹೀಗಾಗಿ ಈ ಬಾರಿ ಕುಮಾರಣ್ಣನ ನೋಟು, ಯೋಗೇಶ್ವರ್ ಗೆ ಓಟು ಎಂದು ತೀರ್ಮಾನ ಮಾಡಿ.
ನಾವು ಗ್ಯಾರಂಟಿ ಯೋಜನೆ ಕೊಟ್ಟು ಕುಮಾರಣ್ಣ, ಅಶೋಕಣ್ಣ ನಿಂದ ಬೈಸಿಕೊಳ್ಳುತ್ತಿದ್ದೇವೆ. ನಾವು ಯೋಜನೆ ಜಾರಿ ಮಾಡುವಾಗ ಜಾತಿ ನೋಡಿದ್ದೇವೆಯೇ? ಆದರೂ ಪ್ರಧಾನಮಂತ್ರಿಗಳು ಮಹಿಳೆಯರಿಗೆ 2 ಸಾವಿರ ಕೊಟ್ಟು ರಾಜ್ಯ ಹಾಳುಮಾಡಿದ್ದೇವೆ ಎಂದು ಟೀಕಿಸುತ್ತಿದ್ದಾರೆ”.
ನಾಳಿನ ತೊಟ್ನಳ್ಳಿಯ ಪೂಜ್ಯರಿಂದ ಪಾದಯಾತ್ರೆ ಬಿಜೆಪಿ ಬೆಂಬಲ: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ
ರೈತರಿಗೆ ಸಿಹಿ ಸುದ್ದಿ ; ಕೇಂದ್ರ ಸರ್ಕಾರದ ಈ ಯೋಜನೆಯಡಿ ‘2 ಲಕ್ಷ ಸಾಲ’ ಲಭ್ಯ, ನೀವೂ ಅರ್ಜಿ ಸಲ್ಲಿಸಿ