ಬೆಂಗಳೂರು: ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ನೆಟ್ಟು ಬೆಳೆಸುತ್ತಿರುವ ಶ್ರೀಗಂಧ ಮತ್ತು ಅರಣ್ಯದಲ್ಲಿನ ಶ್ರೀಗಂಧ ಮರಗಳ ಸಂರಕ್ಷಣೆಗೆ ಕಾರ್ಯ ಯೋಜನೆ ರೂಪಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್.ಡಿ.ಎಲ್) ಅಧ್ಯಕ್ಷ ಅಪ್ಪಾಜಿ ನಾಡಗೌಡರೊಂದಿಗೆ ಇಂದು ನಡೆದ ಸಭೆಯ ಸಂದರ್ಭದಲ್ಲಿ ಸಚಿವರು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಕೆ.ಎಸ್.ಡಿ.ಎಲ್.ಗೆ ಶ್ರೀಗಂಧವೇ ಮೂಲಾಧಾರವಾಗಿದ್ದು, ತನ್ನ ಲಾಭದ ಅನುದಾನದ ಅಡಿಯಲ್ಲಿ ಪ್ರತಿ ವರ್ಷ 1 ಲಕ್ಷ ಶ್ರೀಗಂಧ ಸಸಿ ನೆಡಲು ಅರಣ್ಯ ಇಲಾಖೆಗೆ 50 ಲಕ್ಷ ರೂಪಾಯಿ ನೀಡಲಿದೆ ಎಂದು ಕೆ.ಎಸ್.ಡಿ.ಎಲ್. ಅಧ್ಯಕ್ಷರು ತಿಳಿಸಿದರು.
ಶ್ರೀಗಂಧ ಕಳವಾಗದಂತೆ ನಿಯಂತ್ರಿಸುವ ಅಗತ್ಯ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ನೆಡುತೋಪುಗಳಲ್ಲಿ ನೆಟ್ಟಿರುವ ಮತ್ತು ಅರಣ್ಯದೊಳಗೆ ಬೆಳೆದಿರುವ ಕಟಾವು ಮಾಡಬಹುದಾದ ಬಲಿತ ಮರಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲು ಸಿದ್ಧ ಎಂದು ಅಧ್ಯಕ್ಷರು ಹೇಳಿದರು.
ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಶ್ರೀಗಂಧ ಕಳುವಾಗದಂತೆ ತಡೆಯಬಹುದು. ಈಗಾಗಲೇ ಅರಣ್ಯ ಇಲಾಖೆ ಇಂತಹ ಪ್ರಯೋಗ ಮಾಡಿದ್ದು ಯಶಸ್ಸು ಲಭಿಸಿದೆ. ಬಾರ್ ಕೋಡ್ ಅಳವಡಿಸಿ ಶ್ರೀಗಂಧ ಕಳವು ತಡೆಯಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.
ರೈತರಿಗೆ ಶ್ರೀಗಂಧ ಬೆಳೆಯುವ ಕುರಿತಂತೆ ಹೆಚ್ಚಿನ ಅರಿವು ಮೂಡಿಸಲು ಮತ್ತು ಬೆಳೆಯುವ ವಿಧಾನದ ಕುರಿತಂತೆ ತಿಳಿಯಪಡಿಸಲು ಕೃಷಿ ಇಲಾಖೆ, ಧಾರವಾಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕಾರ್ಯಾಗಾರ ಏರ್ಪಡಿಸಲೂ ನಿರ್ಧರಿಸಲಾಯಿತು.
ಕೆಲವೇ ಕ್ಷಣಗಳಲ್ಲಿ ಸಿಎಂ ಸಿದ್ಧರಾಮಯ್ಯ ರಾಜ್ಯಪಾಲರ ಭೇಟಿ: ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆ, ವರದಿ ಸಾಧ್ಯತೆ
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ‘ಗ್ರಾಮಠಾಣ’ ಒಳಗಿನ, ಹೊರಗಿನ ‘ಆಸ್ತಿ ಅಳತೆ’ಗೆ ಅವಕಾಶ