ಮಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿವಿಯು ಹಬ್ಬ-ಹರಿದಿನಗಳಂದು ಹಾಗೂ ವಾರಾಂತ್ಯದ ಭಾನುವಾರದಂದು ಪರೀಕ್ಷೆ ನಡೆಸಲು ತಯಾರಿ ನಡೆದಿದೆ ಎಂಬ ಮಾಹಿತಿ ಬಂದಿದೆ. ಆ.25ರಂದು ಹಬ್ಬದ ದಿನದಂದೇ ಪರೀಕ್ಷೆ ನಿಗದಿ ಮಾಡಲಿದೆ ಎನ್ನಲಾಗುತ್ತಿದೆ. ಇಂತಹ ಎಲ್ ಎಲ್ ಬಿ ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿ ಹೋರಾಟಗಾರ ಕ್ರಿಸ್ಟನ್ ಮನೆಜಸ್ ಅವರು ಕುಲಪತಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿವಿಯ ಕುಲಪತಿಗಳಿಗೆ ಪತ್ರ ಬರೆದಿರುವಂತ ಅವರು, ಹಬ್ಬ ಹರಿದಿನಗಳಂದು, ರಾಷ್ಟ್ರೀಯ ರಜಾದಿನಗಳಂದು ಹಾಗೂ ವಾರಾಂತ್ಯದ ಭಾನುವಾರದಂದು ಶೈಕ್ಷಣಿಕ ತರಗತಿಗಳನ್ನು ಹಾಗೂ ಪರೀಕ್ಷೆಗಳನ್ನು ನಡೆಸುವುದು ಸರಿಯಲ್ಲ ಎಂಬ ಸಂಪ್ರದಾಯ ಬಹುಕಾಲ ಹಿಂದಿನಿಂದಲೇ ನಡೆದು ಬಂದಿರುವ ಸಂಪ್ರದಾಯ ಎಂದು ಹೇಳಿದ್ದಾರೆ.
ಕರ್ನಾಟಕ ಕಾನೂನು ವಿಶ್ವವಿದ್ಯಾಲಯವು ಈ ಸಂಪ್ರದಾಯಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವುದು ವಿಷಾದದ ಸಂಗತಿ. ಕಳೆದ ಸೆಮಿಸ್ಟರ್ ಪರೀಕ್ಷೆ ವೇಳೆ ಕ್ರೈಸ್ತ ಧರ್ಮೀಯರ ಹಬ್ಬದ ದಿನದಂದು ಪರೀಕ್ಷೆ ನಿಗದಿ ಪಡಿಸಿ, ವ್ಯಾಪಕ ಆಕ್ಷೇಪ ವ್ಯಕ್ತವಾದ ನಂತರ ಬದಲಾವಣೆ ಮಾಡಲಾಗಿತ್ತು. ಈ ಬಾರಿ ಹಿಂದೂಗಳ ಹಬ್ಬವಾಗಿರುವ ಶ್ರೀಕೃಷ್ಣ ಜನ್ಮಾಷ್ಠಮಿ ದಿನ 25.08.2024ರಂದು ಪರೀಕ್ಷೆ ನಡೆಲು ತೀರ್ನಾನಿಸಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ. ಅಷ್ಟೇ ಅಲ್ಲ, ಭಾನುವಾರವೂ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿ ಸಿದ್ದಗೊಳಿಸಲಾಗುತ್ತಿದೆ ಎಂದೂ ತಿಳಿದುಬಂದಿದೆ. ವಿಶ್ವವಿದ್ಯಾಲಯದ ಈ ರೀತಿಯ ನಡೆ ಸರಿಯಲ್ಲ. ಹಾಗಾಗಿ ವಿದ್ಯಾರ್ಥಿಗಳ ಹಿತಕ್ಕನುಗುಣವಾಗಿ ಸೂಕ್ತ ಕ್ರಮ ಕೈಗೊಂಡು ಗೊಂದಲಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.