ಬೆಂಗಳೂರು : ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಪಾರದರ್ಶಕವಾಗಿ ಕೌನ್ಸೆಲಿಂಗ್ ನಡೆಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ನೇಮಕಾತಿ ಪ್ರಕ್ರಿಯೆಯನ್ನು ಗುರುವಾರ ಯಶಸ್ವಿಯಾಗಿ ಪೂರ್ಣಗೊಳಿಸಿತು.
ಕೆಪಿಟಿಸಿಎಲ್‌ನ ಲೆಕ್ಕಾಧಿಕಾರಿಗಳ ಸಂಘದ ಸಭಾಂಗಣದಲ್ಲಿ ಡಿಸೆಂಬರ್ 10 ಮತ್ತು 11, 2025 ರಂದು ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲಾಯಿತು. ಕವಿಪ್ರನಿನಿ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ನೇತೃತ್ವದಲ್ಲಿ ನಡೆದ ನೇಮಕಾತಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಂಡು, 448 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ನಿಗಮದ ಉನ್ನತಾಧಿಕಾರಿಗಳು ವಿತರಿಸಿದರು.
ಎರಡು ದಿನಗಳ ಕಾಲ ನಡೆದ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಂತ್ರಾಂಶವನ್ನು ನಿಗಮದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ಅಭಿವೃದ್ದಿ ಪಡಿಸಿದ್ದರು.
ಕೆಪಿಟಿಸಿಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವಂತೆ ಒಟ್ಟು 491 ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆಗೊಂಡಿದ್ದು, ಈ ಪೈಕಿ 448 ಅಭ್ಯರ್ಥಿಗಳಿಗೆ ಈಗ ನೇಮಕಾತಿ ಆದೇಶಗಳನ್ನು ವಿತರಿಸಲಾಗಿದೆ. ಉಳಿದ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಅವರ ಮೀಸಲಾತಿ ನೈಜತೆ ಪ್ರಮಾಣಪತ್ರ ಮತ್ತು ಸಿಂಧುತ್ವ ಪ್ರಮಾಣಪತ್ರಗಳು ಸ್ವೀಕೃತಗೊಂಡ ನಂತರ ನೇಮಕಾತಿ ಆದೇಶಗಳನ್ನು ವಿತರಿಸಲಾಗುವುದು ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನೇಮಕಾತಿ ಕೌನ್ಸೆಲಿಂಗ್‌ನಲ್ಲಿ ರಾಜ್ಯದ ವಿವಿದೆಢೆಗಳಿಂದ ಅಭ್ಯರ್ಥಿಗಳು ಭಾಗವಹಿಸಿದ್ದರು, ಇವರುಗಳಲ್ಲಿ ಮಾಜಿ ಸೈನಿಕರು, ಶ್ರವಣದೋಷ ಅಭ್ಯರ್ಥಿಗಳು ಮತ್ತು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಭಾಗಿಯಾಗಿದ್ದರು.
ಅಕ್ಟೋಬರ್ 14, 2024ರ ಉದ್ಯೋಗ ಪ್ರಕಟಣೆ ಪ್ರಕಾರ ಈ ನೇಮಕಾತಿಯನ್ನು ಹತ್ತನೇ ತರಗತಿ ಅಂಕಗಳ ಜೇಷ್ಠತೆ ಹಾಗೂ ಮೇ ತಿಂಗಳಲ್ಲಿ ನಡೆಸಿದ ಸಹನ ಶಕ್ತಿ ಪರೀಕ್ಷೆಯ ಅರ್ಹತೆಯ ಆಧಾರದ ಮೇಲೆ ಆಗಸ್ಟ್ ತಿಂಗಳಿನಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ವಿತರಿಸಲಾಯಿತು. ರಾಜ್ಯದಾದ್ಯಂತ 70,000 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು.
ನಮ್ಮ ಸರ್ಕಾರ ನುಡಿದಂತೆ ನೇಮಕಾತಿ ನಡೆಸುತ್ತಿದ್ದು, ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ವೇಗವಾಗಿ ನೇಮಕಾತಿ ಪ್ರಕ್ರಿಯೆ ನಡೆಸಿದೆ. ಇಂಧನ ಇಲಾಖೆಯ ದಕ್ಷತೆ ಹೆಚ್ಚಿಸಲು ಮೂಲ ಸೌಕರ್ಯ ಹೆಚ್ಚಿಸುವುದರ ಜತೆಗೆ ಅಗತ್ಯ ಮಾನವ ಸಂಪನ್ಮೂಲ ವ್ಯವಸ್ಥೆ ಬಲಗೊಳಿಸಲಾಗುತ್ತಿದೆ. ಮುಂದೆಯೂ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು.
– ಕೆ.ಜೆ.ಜಾರ್ಜ್, ಇಂಧನ ಸಚಿವರು
ಕೆಪಿಟಿಸಿಎಲ್ ಆಧಾರಸ್ಥಂಭ ಕಿರಿಯ ಪವರ್ ಮ್ಯಾನ್ ಮತ್ತು ಕಿರಿಯ ಸ್ಟೇಷನ್ ಪರಿಚಾರಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಇಂಧನ ಇಲಾಖೆಯ ಕಾರ್ಯಗಳಿಗೆ ವೇಗ ನೀಡಲು ಹುದ್ದೆ ಭರ್ತಿ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು.
– ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ
ಕಿರಿಯ ಸ್ಟೇಷನ್ ಪರಿಚಾರಕರು ಹಾಗೂ ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕ ಹಾಗೂ ತ್ವರಿತಗತಿಯಲ್ಲಿ ನಡೆದಿದೆ. ಎರಡು ದಿನಗಳ ಕೌನ್ಸೆಲಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಅದೇಶಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿ ಒದಗಿಸಲಾಗುವುದು”.
-ಪಂಕಜ್ ಕುಮಾರ್ ಪಾಂಡೆ, ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್
ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ತಕ್ಷಣ ತೊಗರಿ ಖರೀದಿ ಕೇಂದ್ರ ಆರಂಭಿಸಿ: ರಾಜಕುಮಾರ ಪಾಟೀಲ್ ತೇಲ್ಕೂರ್ ಒತ್ತಾಯ
https://kannadanewsnow.com/kannada/cm-siddaramaiahs-meeting-with-various-farmer-organizations-in-belgaum-here-are-the-major-highlights/








