ಬೆಂಗಳೂರು : ಒಂದೇ ದಿನ ಕರ್ನಾಟಕ ಲೋಕಸೇವಾ ಆಯೋಗ (KPSC), ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೇರಿ ಹಲವು ನೇಮಕಾತಿಗಳಿಗೆ ಪರೀಕ್ಷೆ ನಿಗದಿಪಡಿಸಲಾಗಿದ್ದು, ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸಿಬಿಎಸ್ಇ, ಯುಪಿಎಸ್ಸಿ ಮುಂತಾದ ಸಂಸ್ಥೆಗಳಿಂದ ವಿವಿಧ ಹುದ್ದೆಗಳ ನೇಮಕಾತಿ ಹಾಗೂ ವೃತ್ತಿಪರ ಸ್ಪರ್ಧಾತ್ಮಕ ಪರೀಕ್ಷೆಗಳು ಒಂದೇ ದಿನಾಂಕಗಳಂದು ನಿಗದಿಯಾಗಿದೆ. ಕೆಪಿಎಸ್ಸಿಯಿಂದ 100 ಭೂಮಾಪಕರ ಹುದ್ದೆಗಳ (ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ) ನೇಮಕಾತಿಗೆ ಜು.7ರಂದು ಪರೀಕ್ಷೆ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿಯಾಗಿದೆ. ಅದೇ ದಿನ ಸಿಬಿಎಸ್ ಇಯಿಂದ ಸಿಟಿಇಟಿ ಪರೀಕ್ಷೆ ಮತ್ತು ಯುಪಿಎಯಿಂದ ಇಪಿಎಫ್ಒ ನ 322 ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ ಪರೀಕ್ಷೆ ನಿಗದಿಯಾಗಿದೆ.
ಆಗಸ್ಟ್ 11ರಂದು ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಹಾಗೂ ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ನೇಮಕಕ್ಕೆ ಕೆಪಿಎಸ್ ಸಿ ಪರೀಕ್ಷೆಯ ದಿನಾಂಕ ಪ್ರಕಟಿಸಿದೆ. ಇನ್ನೂ ಅದೇ ದಿನ ಕೆಇಎ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್ಮತ್ತು ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ್ದು,ಈ ಮೂಲಕ ವಿವಿಧ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.