ನವದೆಹಲಿ: ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಯ ಹಿತದೃಷ್ಟಿಯಿಂದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಸತ್ಯಂ ಸಿಂಗ್ ರಜಪೂತ್ ಅವರು ಸಲ್ಲಿಸಿದ ಅರ್ಜಿಯಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ಶಾಸಕ ಮದನ್ ಮಿತ್ರಾ ವಿರುದ್ಧ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ದೂಷಿಸುವ ಮತ್ತು ಅವಮಾನಿಸುವ ಸಂವೇದನಾರಹಿತ ಹೇಳಿಕೆಗಳಿಗಾಗಿ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
“ಅಪರಾಧವನ್ನು ಎಸಗಲು ಅನುವು ಮಾಡಿಕೊಟ್ಟ ಸಾಂಸ್ಥಿಕ ವೈಫಲ್ಯಗಳ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ಮತ್ತು ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕೆ ನಿರ್ದೇಶಿಸಬೇಕು” ಎಂದು ವಕೀಲ ರಜಪೂತ್ ಕೋರಿದ್ದಾರೆ.
ಈ ಘಟನೆಯು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಯಂತ್ರದಲ್ಲಿನ ತೀವ್ರ ಲೋಪವನ್ನು ಒತ್ತಿಹೇಳುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಹಿಂದೆ ಆರ್ ಜಿ ಕಾರ್ ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ಉಲ್ಲೇಖಿಸಿದ ಅರ್ಜಿಯಲ್ಲಿ, ಪಶ್ಚಿಮ ಬಂಗಾಳದಾದ್ಯಂತದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಸುರಕ್ಷಿತವಾಗಿಲ್ಲ ಎಂದು ಹೇಳಿದೆ.