ಶಿವಮೊಗ್ಗ : ಕೆಎಂಎಫ್ ನಂದಿನಿ ಹಾಲು ಮಾರಾಟಗಾರರಿಗೆ ಸ್ಪಂದಿಸುತ್ತಿಲ್ಲ. ಹಲವು ವರ್ಷಗಳಿಂದ ಕೆ.ಎಂ.ಎಫ್. ಮೂಲಕ ಶಿಮೂಲ್ ಅಭಿವೃದ್ದಿಗೆ ಶ್ರಮಿಸುತ್ತಿರುವ ಹಾಲು ಮಾರಾಟಗಾರರನ್ನು ಭಿಕ್ಷುಕರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ತಾಲ್ಲೂಕು ಹಾಲು ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್ ದೂರಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ಮೂರು ದಶಕಗಳಿಂದ ನಂದಿನಿ ಉತ್ಪನ್ನಗಳನ್ನು ಕಮೀಷನ್ ಆಧಾರದಲ್ಲಿ ಮಾರಾಟ ಮಾಡುವ ಏಜೆಂಟರ ಬಗ್ಗೆ ತೀವೃ ನಿರ್ಲಕ್ಷ್ಯ ವಹಿಸಲಾಗಿದೆ ಎಂದರು.
ಹಿಂದೆ ಏಜೆಂಟರಿಂದ ಹಾಲಿನ ಹಣವನ್ನು ತೆಗೆದುಕೊಂಡು ಹೋಗಲಾಗುತಿತ್ತು. ಕೆಲವು ವರ್ಷಗಳ ಹಿಂದೆ ಅದನ್ನು ಎಚ್.ಡಿ.ಎಫ್.ಸಿ. ಬ್ಯಾಂಕ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿ ಮಾಡಲು ತಿಳಿಸಲಾಗಿತ್ತು. ಆದರೆ ಆನ್‌ಲೈನ್‌ನಲ್ಲಿ ಪಾವತಿ ಮಾಡುವ ಏಜೆಂಟರ ಲಕ್ಷಾಂತರ ರೂಪಾಯಿ ಹಣ ಕಡಿತವಾಗುತ್ತಿದೆ. ಒಂದೆರಡು ರೂಪಾಯಿ ಕಮೀಷನ್‌ಗಾಗಿ ಕೆಲಸ ಮಾಡುವ ನಮಗೆ ಬ್ಯಾಂಕ್‌ನಿಂದ ಆನ್‌ಲೈನ್ ವಂಚನೆಯಾಗುತ್ತಿದೆ. ಈ ಬಗ್ಗೆ ಶಿಮುಲ್ ಅಧ್ಯಕ್ಷರು, ನಿರ್ದೇಶಕರಿಗೆ ತಿಳಿಸಿದರೆ ಸ್ಪಂದಿಸದೇ ಅವರಿವರ ಮೇಲೆ ಆರೋಪ ಹೊರಿಸಿ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಶಿಮುಲ್ ಆಡಳಿತ ಮಂಡಳಿ, ಅಧಿಕಾರಿ ವರ್ಗ ನಮ್ಮನ್ನು ಶೋಷಣೆ ಮಾಡುತ್ತಿದೆ ಎಂದರು.
ಸಾಕಷ್ಟು ಬಾರಿ ಹಾಲು ಮಾರಾಟಗಾರರ ಕಷ್ಟ ಹೇಳಿದರೂ ಸ್ಪಂದಿಸುತ್ತಿಲ್ಲ. ಶಿಮುಲ್‌ಗೆ ಹಾಲು ಉತ್ಪಾದಕರು ಬಿಟ್ಟರೆ ಬೇರೆ ಯಾರೂ ಮುಖ್ಯ ಎನಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸೆ. 30ರಂದು ಎಚ್.ಡಿ.ಎಫ್.ಸಿ. ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ನಮ್ಮ ಸಮಸ್ಯೆ ಬಗೆಹರಿಯದೆ ಹೋದಲ್ಲಿ ಅ. 1ರಂದು ತಾಲ್ಲೂಕಿನಾದ್ಯಂತ ನಂದಿನಿ ಹಾಲು ಮತ್ತಿತರೆ ಉತ್ಪನ್ನಗಳ ಮಾರಾಟ ಸಂಪೂರ್ಣ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಹಾಲು ಮಾರಾಟಗಾರರ ಹೋರಾಟಕ್ಕೆ ಗ್ರಾಹಕರು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸುದ್ದಿಗೋಷ್ಟಿಯಲ್ಲಿ ಲಕ್ಷ್ಮಣ್, ಕೆಂಪರಾಜ್, ಪ್ರಶಾಂತ್, ಮಾಲತೇಶ್, ಅಜಯ್, ಸುವರ್ಣ ಉಪಾಧ್ಯಾಯ, ಭಾರ್ಗವ, ಗುತ್ಯಪ್ಪ, ರಮೇಶ್, ಲೋಕೇಶಕುಮಾರ್ ಹಾಜರಿದ್ದರು.