ಕಠ್ಮಂಡು: ಒಡಿಶಾ ವಿಶ್ವವಿದ್ಯಾಲಯದಲ್ಲಿ ನೇಪಾಳದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಮತ್ತು ಕಾಲೇಜು ಆಡಳಿತವು ನೇಪಾಳಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಖಾಲಿ ಮಾಡುವಂತೆ ಆದೇಶಿಸಿದ ಕೆಲವು ದಿನಗಳ ನಂತರ, 159 ವಿದ್ಯಾರ್ಥಿಗಳು ರಕ್ಸೌಲ್ ಗಡಿ ಮೂಲಕ ದೇಶಕ್ಕೆ ಮರಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ಸಂಜೆಯವರೆಗೆ 159 ನೇಪಾಳಿ ವಿದ್ಯಾರ್ಥಿಗಳು ರಕ್ಸೌಲ್ ಗಡಿಯಿಂದ ಮನೆಗೆ ಮರಳಿದ್ದಾರೆ ಎಂದು ಪಾರ್ಸಾದ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಸುಮನ್ ಕುಮಾರ್ ಕರ್ಕಿ ತಿಳಿಸಿದ್ದಾರೆ.
ಒಡಿಶಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಯಲ್ಲಿ ಮೂರನೇ ವರ್ಷದ ಬಿಟೆಕ್ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಥಿನಿ ಪ್ರಕೃತಿ ಲಾಮ್ಸಾಲ್ (20) ಫೆಬ್ರವರಿ 16 ರಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಒಡಿಶಾದ ಕೆಐಐಟಿಯಲ್ಲಿ ಸುಮಾರು 1,000 ನೇಪಾಳಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಹೇಳಿಕೆ
ಕಠ್ಮಂಡುವಿನ ರಿಪೋರ್ಟರ್ಸ್ ಕ್ಲಬ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನೇಪಾಳಕ್ಕೆ ಮರಳಿದ ವಿದ್ಯಾರ್ಥಿಗಳ ಗುಂಪು, ಕಾಲೇಜು ಹಾಸ್ಟೆಲ್ನಲ್ಲಿ ನೇಪಾಳದ ವಿದ್ಯಾರ್ಥಿನಿಯ ಸಾವಿನ ನಂತರ ಕೆಐಐಟಿಯಲ್ಲಿ ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಹೇಳಿದರು.
“ಪ್ರಕೃತಿ ಲಾಮ್ಸಾಲ್ ಅವರ ನಿಗೂಢ ಸಾವಿನ ನಂತರ, ನಮ್ಮನ್ನು ನಿಂದಿಸಲಾಯಿತು ಮತ್ತು ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು” ಎಂದು ವಿದ್ಯಾರ್ಥಿಗಳು ಹೇಳಿದರು.
“ವಿಶ್ವವಿದ್ಯಾಲಯದ ಶಿಕ್ಷಕರು ಮತ್ತು ಇತರರ ಸಮ್ಮುಖದಲ್ಲಿ ಭದ್ರತಾ ಸಿಬ್ಬಂದಿ ನಮ್ಮನ್ನು ಥಳಿಸಿದರು” ಎಂದು ಆರೋಪಿಸಿದ್ದಾರೆ.