ಶಿವಮೊಗ್ಗ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿರುವ ಸಾಗರ ಬಿಜೆಪಿ ನಗರ ಮಂಡಲ ಹಾಗೂ ಯುವ ಮೋರ್ಚಾ ಕಾರ್ಯಕರ್ತರು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಇಂದು ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.
ಹತಾಶೆಯಿಂದ ಖರ್ಗೆ ಹೇಳಿಕೆ: ಕೆ.ಆರ್ ಗಣೇಶ್ ಪ್ರಸಾದ್
ಮನವಿ ಸಲ್ಲಿಸಿದ ನಂತರ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್. ಗಣೇಶ್ ಪ್ರಸಾದ್, “ಕಾಂಗ್ರೆಸ್ ನಾಯಕರಿಗೆ ಪ್ರಚೋದನಾಕಾರಿ ಭಾಷಣ ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ಸಂವಿಧಾನದ ಹೆಸರಲ್ಲಿ ಭಾಷಣ ಮಾಡುವವರು ಬಿಜೆಪಿ ಮತ್ತು ಆರ್.ಎಸ್.ಎಸ್. ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗುವ ಭೀತಿಯಿಂದ ಹಾಗೂ ತಮ್ಮ ಅಧ್ಯಕ್ಷ ಸ್ಥಾನ ಕೈತಪ್ಪುತ್ತದೆ ಎಂಬ ಹತಾಶೆಯಿಂದ ಖರ್ಗೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರ ಮಾತುಗಳು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೂ ಧಕ್ಕೆ ತರುವಂತಿದ್ದು, ಆ ಸಮುದಾಯವೇ ಖರ್ಗೆ ವಿರುದ್ಧ ಪ್ರತಿಭಟಿಸಬೇಕು,” ಎಂದು ಕರೆ ನೀಡಿದರು.
ಹಿರಿತನಕ್ಕೆ ತಕ್ಕ ಮಾತಲ್ಲ: ಮಧುರಾ ಶಿವಾನಂದ್
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, “ಮಲ್ಲಿಕಾರ್ಜುನ ಖರ್ಗೆ ಅವರ ಹಿರಿತನದ ಬಗ್ಗೆ ಇದ್ದ ಗೌರವ ಅವರ ಹೇಳಿಕೆಯಿಂದ ಕಳೆದುಹೋಗಿದೆ. ಕೇಂದ್ರ ಸರ್ಕಾರದ ಜನಪರ ಆಡಳಿತಕ್ಕೆ ಹೆದರಿ ಕಾಂಗ್ರೆಸ್ ಹತಾಶ ಮನಸ್ಥಿತಿ ಪ್ರದರ್ಶಿಸುತ್ತಿದೆ. ದೇಶ ಕಟ್ಟುವ ಆರ್.ಎಸ್.ಎಸ್. ಬಗ್ಗೆ ಮಾತನಾಡುವಾಗ ಖರ್ಗೆ ಅವರು ಮಾತಿನ ಮೇಲೆ ಹಿಡಿತ ಹೊಂದಿರಲಿ,” ಎಂದು ಎಚ್ಚರಿಸಿದರು.
ಟೀಕೆ ಮಾಡುವುದರಲ್ಲೇ ಕಾಲ: ಪರಶುರಾಮ್
ಯುವ ಮೋರ್ಚಾ ಅಧ್ಯಕ್ಷ ಪರಶುರಾಮ್ ಮಾತನಾಡಿ, “ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆ ಕೇವಲ ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದ್ದರೂ, ಅಭಿವೃದ್ಧಿಯತ್ತ ಗಮನಹರಿಸದೆ ಬಿಜೆಪಿಯನ್ನು ಬೈಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಆರ್.ಎಸ್.ಎಸ್. ಅಥವಾ ಬಿಜೆಪಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್ ಬಾಬು, ನಗರಸಭೆ ಮಾಜಿ ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಆರ್. ಶ್ರೀನಿವಾಸ್, ಬಿ.ಎಚ್. ಲಿಂಗರಾಜ್, ಗುರುಪ್ರಸಾದ್, ರತ್ನಾಕರ ಶೇಟ್, ಆದರ್ಶ, ನಿತಿನ್ ಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.








