ಬೆಂಗಳೂರು; ಕಿಯೋನಿಕ್ಸ್ ಹಗರಣ ಸಂಬಂಧ ರಾಜ್ಯ ಸರ್ಕಾರದಿಂದ ಕಿರುಕುಳ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಜಂಟಿ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ. ಅವರು ಏನು ಹೇಳಿದ್ರು ಅಂತ ಮುಂದೆ ಓದಿ.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ದಯೆಯಿಂದ ಕಿಯೋನಿಕ್ಸ್ ಸರಬರಾಜುದಾರರು ದಯಾಮರಣ ಕೋರುವಂತಾಗಿದೆಯೇ ಹೊರತು ನಮ್ಮಿಂದಲ್ಲ. ಭ್ರಷ್ಟಾಚಾರದೆಡೆಗಿನ ನಮ್ಮ ಸರ್ಕಾರದ ಕಠಿಣ ನಿಲುವಿಗೆ ಹಾಗೂ ಜನರ ತೆರೆಗೆ ಹಣದ ದುರ್ಬಳಕೆಯನ್ನು ತಡೆಯುವ ನಮ್ಮ ಪ್ರಯತ್ನಕ್ಕೆ ಬಿಜೆಪಿಯವರು “ಕಿರುಕುಳ“ ಎಂದು ಹೆಸರು ಕೊಡುವುದು ಎಷ್ಟು ಸರಿ? ಪಾರದರ್ಶಕತೆಯು ಭ್ರಷ್ಟರಿಗೆ ಕಿರುಕುಳದಂತೆ ಭಾಸವಾಗುವುದು ಸಹಜವೇ!
ಇಂದು ಕಿಯೋನಿಕ್ಸ್ ಸರಬರಾಜುದಾರರ ಬಿಲ್ ಬಾಕಿ ಉಳಿದಿದೆ ಎಂದರೆ ಅದಕ್ಕೆ ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು, ಬೊಮ್ಮಯಿಯವರು ಹಾಗೂ ಮಾಜಿ ಸಚಿವ ಅಶ್ವಥ್ ನಾರಾಯಣ್ ಅವರೇ ನೇರ ಕಾರಣ. ಜನಸಾಮಾನ್ಯರ ಬೆವರಿನ ನೂರಾರು ಕೋಟಿ ತೆರಿಗೆ ಹಣದ ಪ್ರತಿ ರೂಪಾಯಿಗೂ ಸಮರ್ಪಕ ಲೆಕ್ಕ ಇಡುವುದು ನಮ್ಮ ಹೊಣೆ ಮತ್ತು ಅತ್ಯಗತ್ಯದ ಕರ್ತವ್ಯ, ಆ ಕರ್ತವ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ
– 2018-2023ರ ನಡುವೆ ನಡೆದ ವಹಿವಾಟುಗಳು ಮತ್ತು ಸಂಗ್ರಹಣೆಗಳಿಗೆ ಸಂಬಂಧಿಸಿದಂತೆ ಅಕೌಂಟೆಂಟ್ ಜನರಲ್ ಕಚೇರಿಯು ನಡೆಸಿದ ಟೆಸ್ಟ್ ಆಡಿಟ್ ತಪಾಸಣೆ ವರದಿಯಲ್ಲೆ ಭಾರಿ ಮೌಲ್ಯದ ಉಲ್ಲಂಘನೆಗಳು ಬೆಳಕಿಗೆ ಬಂದಿವೆ.
– ಕಿಯೋನಿಕ್ಸ್: 45 ಸಂಗ್ರಹಣೆಗಳ ಪ್ರಾಯೋಗಿಕ ತನಿಖೆ
– 455 ಕೋಟಿ ರೂ. ಮೌಲ್ಯದ ಉಲ್ಲಂಘನೆ: ಸಮಗ್ರ ತನಿಖೆ
ಕಿಯೊನಿಕ್ಸ್ ಸಂಸ್ಥೆಯಲ್ಲಿ 2018-2023ರ ನಡುವೆ ನಡೆದ ವಹಿವಾಟುಗಳು ಮತ್ತು ಸಂಗ್ರಹಣೆಗಳಿಗೆ ಸಂಬಂಧಿಸಿದಂತೆ ಅಕೌಂಟೆಂಟ್ ಜನರಲ್ ಕಚೇರಿಯು ನಡೆಸಿದ ವಿವರವಾದ ಆಡಿಟ್ ತಪಾಸಣೆ ವರದಿಯಂತೆ ಭಾರಿ ಮೌಲ್ಯದ ಉಲ್ಲಂಘನೆಗಳು ಬೆಳಕಿಗೆ ಬಂದಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಿಯೊನಿಕ್ಸ್ ಸಂಸ್ಥೆಯ ಅಧ್ಯಕ್ಷ ಶರತ್ ಬಚ್ಚೇಗೌಡ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಿಯೊನಿಕ್ಸ್ ಸಂಸ್ಥೆ ಆದೇಶ ನೀಡಿದ್ದ 1544 ಕೋಟಿ ರೂ. ಗಳಿಗೆ ಸಂಬಂಧಿಸಿದಂತೆ ಸುಮಾರು 1200 ಸಂಗ್ರಹಣೆಗಳಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯು 45 ಸಂಗ್ರಹಣೆಗಳನ್ನು ಪ್ರಾಯೋಗಿಕವಾಗಿ ಆಡಿಟ್ ತಪಾಸಣೆಗೆ ಒಳಪಡಿಸಿದ್ದು, 455 ಕೋಟಿ ರೂ. ಮೌಲ್ಯದ ಉಲ್ಲಂಘನೆಗಳು ಕಂಡು ಬಂದಿವೆ, 2018-2023ರ ನಡುವೆ ನಡೆದ ವಹಿವಾಟುಗಳನ್ನು ಸಮಗ್ರ ತನಿಖೆಗೆ ಒಳಪಡಿಸುವ ಸಲುವಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರರಾವ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ.
ಕಂಪನಿಯು ವಿವಿಧ ಸರ್ಕಾರಿ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಿಗೆ ಒದಗಿಸಿದ ಹೆಚ್ಚಿನ ಸರಕುಗಳು ಮತ್ತು ಸೇವೆಗಳಿಗೆ ಮೂರನೇ ವ್ಯಕ್ತಿಯ ತಪಾಸಣೆಗಳನ್ನು ನಡೆಸದಿರುವುದು; ನಕಲಿ ಮೂರನೆ ವ್ಯಕ್ತಿಗಳನ್ನು ಬಳಸಿಕೊಂಡಿರುವುದು, ಒಪ್ಪಂದದ ಷರತ್ತುಗಳ ಉಲ್ಲಂಘನೆ; ಪಾವತಿ ಅಕ್ರಮಗಳು; ತಪ್ಪಾದ ಮೂಲ ದರವನ್ನು ಅಳವಡಿಸಿಕೊಳ್ಳುವುದು; ಎಂಪನೆಲ್ಮೆಂಟ್ ಉಲ್ಲಂಘನೆಗಳು; ಬಿಡ್ಡರ್ ಗಳು ಸಲ್ಲಿಸಿದ ಆಸಕ್ತಿಯ ಅಭಿವ್ಯಕ್ತಿ (EOI) ಮೌಲ್ಯಮಾಪನಕ್ಕಾಗಿ ಮೌಲ್ಯಮಾಪನ ಸಮಿತಿಗಳನ್ನು ನೇಮಿಸದಿರುವುದು; ಕೆಟಿಟಿಪಿ (KTPP) ಕಾಯಿದೆ ಉಲ್ಲಂಘಿಸಿ ITಗೆ ಸಂಬಂಧಿಸದ ಸರಬರಾಜುಗಳ ಸಂಗ್ರಹಣೆ; ಪ್ರಮಾಣಿತ ಟೆಂಡರ್ ದಾಖಲೆಗಳನ್ನು ಅಳವಡಿಸಿಕೊಳ್ಳದಿರುವುದು; ಟೆಂಡರ್ ವಿಭಜನೆ; ಒಪ್ಪಂದಗಳಲ್ಲಿ ಕಾರ್ಯಕ್ಷಮತೆಯ ಭದ್ರತೆಯನ್ನು ಸಂಗ್ರಹಿಸದಿರುವುದು, ಬಿಡ್ಡರ್‌ಗಳಿಂದ ಅರ್ನೆಸ್ಟ್ ಮನಿ ಡಿಪಾಸಿಟ್ (EMD) ಸಂಗ್ರಹಿಸದಿರುವುದು ಮುಂತಾದ ಉಲ್ಲಂಘನೆಗಳು ಮೇಲ್ನೋಟಕ್ಕೆ ಕಂಡು ಬಂದಿವೆ. ಕಿಯೊನಿಕ್ಸ್ ಸಂಸ್ಥೆಗೆ ಅನ್ವಯವಾಗುವ ಎಲ್ಲಾ ಕಾನೂನುಗಳು ಮತ್ತು ನಿಯಮಗಳ ಅನುಸರಣೆ ಹಾಗೂ ಹೊಣೆಗಾರಿಕೆಯ ಜವಾಬ್ದಾರಿಯನ್ನು ಎತ್ತಿಹಿಡಿಯುವಲ್ಲಿ ಯಾವುದೇ ತೊಡಕಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹಾಗೂ ಶರತ್ ಬಚ್ಚೇಗೌಡ ಅವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಿಯೊನಿಕ್ಸ್ (KEONICS) ಸಂಸ್ಥೆಗೆ ಸಂಬಂಧಿಸಿದ ಸರಬರಾಜುದಾರರು ಹಾಗೂ ಪಾಲುದಾರರು ತಮಗೆ ಪಾವತಿಯಾಗಬೇಕಾದ ಹಣಕ್ಕೆ ಸಂಬಂಧಿಸಿದಂತೆ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಅವರು ಮನವಿಗಳನ್ನು ಆದ್ಯತೆಯ ಮೇಲೆ ಮತ್ತು ಲೆಕ್ಕಪರಿಶೋಧನೆಯ ಅವಲೋಕನಗಳ ಹಿನ್ನೆಲೆಯಲ್ಲಿ ಪರಿಶೀಲಿಸಲಾಗುತ್ತಿದೆ. ಹಣಕಾಸು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಸರಣೆ ಮಾಡುವ ಹಿನ್ನೆಲೆಯಲ್ಲಿ ವಿವಿಧ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟವಾಗದಂತೆ ನೋಡಿಕೊಳ್ಳುವುದು ಪ್ರಾಥಮಿಕ ಗುರಿಯಾಗಿದೆ. ಈ ಉದ್ದೇಶವನ್ನು ಸಾಧಿಸಲು, ಹಣಕಾಸಿನ ಸ್ವಾಮ್ಯದ ನಿಯಮಗಳಿಗೆ ಬದ್ಧವಾಗಿರಲು, ಸಾರ್ವಜನಿಕರ ನಂಬಿಕೆಯನ್ನು ಕಾಪಾಡಿಕೊಳ್ಳಲು, ಅತ್ಯುನ್ನತ ಆರ್ಥಿಕ ಮಾನದಂಡಗಳಂತೆ ನಡೆಯಲು ಇಂತಹ ಕ್ರಮಗಳು ನಿರ್ಣಾಯಕವಾಗಿದೆ.
ಹಣಕಾಸು ಇಲಾಖೆಯು 3ನೇ ಮಾರ್ಚ್ 2023ರ ಅಧಿಸೂಚನೆಯ ಮೂಲಕ ಹೊರಡಿಸಿದ 4ಜಿ ವಿನಾಯಿತಿ ಆದೇಶವನ್ನು ಪಾಲಿಸುವಲ್ಲಿ 2018-2023ರ ನಡುವೆ ನಡೆದ ವಹಿವಾಟುಗಳಲ್ಲಿ ಕಿಯೊನಿಕ್ಸ್ ಸಂಸ್ಥೆಯಲ್ಲಿ ಕೆಲವು ಲೋಪಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಲೋಪಗಳನ್ನು ಸರಿಪಡಿಸುವ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಸ್ಪರ್ಧೆ ಮತ್ತು ಹೆಚ್ಚಿನ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮುಕ್ತ ಟೆಂಡರ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಈ ವಿಧಾನವು ಸ್ಥಾಪಿತ ಮಾರ್ಗಸೂಚಿಗಳೊಂದಿಗೆ ಪಾರದರ್ಶಕತೆ ಮತ್ತು ಅನುಸರಣೆಯನ್ನು ಖಾತ್ರಿಗೊಳಿಸುತ್ತದೆ, ಲೆಕ್ಕ ಪರಿಶೋಧನೆಯಲ್ಲಿ ಗಮನಿಸಲಾದ ನ್ಯೂನ್ಯತೆಗಳನ್ನು ಪರಿಹರಿಸಲು ಹೊಸ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ. ಕಿಯೊನಿಕ್ಸ್ ಸಂಸ್ಥೆಯನ್ನು ಪಾರದರ್ಶಕವಾಗಿ ಮುನ್ನೆಡೆಸುವಲ್ಲಿ ಆಡಳಿತ ಮಂಡಳಿ ಕಾರ್ಯತತ್ಪರವಾಗಿದೆ, ಹಣಕಾಸು ದುರುಪಯೋಗದ ಅಂಶಗಳು ಮೇಲ್ನೋಟಕ್ಕೆ ದೃಢ ಪಟ್ಟಿರುವಾಗ ಯಾವುದೇ ತನಿಖೆಗೆ ಒಳಪಡಿಸದೆ ಪಾವತಿ ಮಾಡಬೇಕೆನ್ನುವ ಬೇಡಿಕೆಯು ನಿಯಮಬಾಹಿರವಾಗುತ್ತದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು, ಪ್ರತಿ ರೂಪಾಯಿಯನ್ನೂ ಪ್ರಾಮಾಣಿಕವಾಗಿ ವಿನಿಯೋಗಿಸುತ್ತೇವೆ ಎಂಬ ಭರವಸೆಯಿಂದ ನಾಡಿನ ಜನತೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆಯೇ ಹೊರತು ಬಿಜೆಪಿಯವರ ತಾಳಕ್ಕೆ ತಕ್ಕಂತೆ ಕುಣಿಯುವುದಕ್ಕಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಆಡಿಟ್ ಪರಿಶೀಲನೆಯಲ್ಲಿ ಆಕ್ಷೇಪಣೆ ಕಂಡುಬಂದಿರುವುದರಿಂದ ಸಮಗ್ರ ತನಿಖೆಯಾಗಬೇಕಿದೆ. ಕಿಯೋನಿಕ್ಸ್ ವೆಂಡರ್ ಗಳಿಗೆ ಏನಾದರೂ ತೊಂದರೆ ಆಗಿದ್ದರೆ ಅದಕ್ಕೆ ಬಿಜೆಪಿಯ ಭ್ರಷ್ಟಾಚಾರ ಕಾರಣವೇ ಹೊರತು ನಾವಲ್ಲ ಎಂಬುದಾಗಿ ತಿಳಿಸಿದ್ದಾರೆ.
ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಜನರ ತೆರಿಗೆ ಹಣಕ್ಕೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ, ಅಡಿಟರ್ ಜನರಲ್ ಅವರ ಮೇಲ್ನೋಟದ ಲೆಕ್ಕಪರಿಶೋದನೆಯಲ್ಲೇ 45 ಆಕ್ಷೇಪಣೆಗಳು ಸೇರಿದಂತೆ 455 ಕೋಟಿ ರೂಪಾಯಿ ಮೌಲ್ಯದ ಉಲ್ಲಂಘನೆಗಳನ್ನು ಉಲ್ಲೇಖಸಿದ್ದಾರೆ, ಇವುಗಳ ಸಮಗ್ರ ತನಿಖೆಯಾಗಬೇಕು, ಜನರ ಹಣವನ್ನು ಮನ ಬಂದಂತೆ ಪೋಲು ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ.
BIG NEWS: ಬೆಂಗಳೂರು ವಿವಿಯಿಂದ ಯಡವಟ್ಟು: ನಾಳೆ ‘CA ಪರೀಕ್ಷೆ’ಯ ಸಮಯಕ್ಕೆ ಬಿಕಾಂ ಪರೀಕ್ಷೆ ನಿಗದಿ
BREAKING: ರಾಜ್ಯ ಸರ್ಕಾರದಿಂದ ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿನ ಬೋಧಕರ ಖಾಲಿ ಹುದ್ದೆ ಭರ್ತಿಗೆ ಗ್ರೀನ್ ಸಿಗ್ನಲ್