ಶಿವಮೊಗ್ಗ: ನಿನ್ನೆ ಸಾಗರ ತಾಲ್ಲೂಕಿನ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬೆಲ್ಜಿಯಂನಿಂದ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮಳೆಹಾನಿಗೆ ಸೂಕ್ತ ಕ್ರಮವನ್ನು, ಮುಂಜಾಗ್ರತೆಯನ್ನು ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ರಸ್ತೆಯಲ್ಲೇ ನಿಂತಿದ್ದಂತ ನೀರಿನಿಂದಾಗಿ ಓಡಾಡೋದಕ್ಕೆ ಆಗುತ್ತಿದ್ದಂತ ತೊಂದರೆಯನ್ನು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಕೆಳದಿ ಪಿಡಿಓ ಕ್ಲಿಯರ್ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೆಳದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬನದಗದ್ದೆಯ ಮಠದ ರಸ್ತೆಯಲ್ಲೇ ಭಾರೀ ಮಳೆಯಿಂದಾಗಿ ನೀರು ಹರಿಯುತ್ತಿತ್ತು. ಈ ಹಿನ್ನಲೆಯಲ್ಲಿ ಆ ರಸ್ತೆಯನ್ನು ಬಳಸಿ ಓಡಾಡುತ್ತಿದ್ದಂತ ಕೆಲ ಹಳ್ಳಿಗಳ ಜನರಿಗೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಈ ವಿಷಯವನ್ನು ಕೆಳದಿ ಪಿಡಿಓ ಅಷ್ಪಕ್ ಅಹಮದ್ ಅವರ ಗಮನಕ್ಕೆ ಗ್ರಾಮಸ್ಥರು ತಂದಿದ್ದರು.
ಈ ವಿಷಯ ತಿಳಿಯುತ್ತಿದ್ದಂತೇ ಅಲರ್ಟ್ ಆದಂತ ಅವರು, ಕೂಡಲೇ ಕೆಳದಿಯ ಬನದಗದ್ದೆಯ ಮಠದ ರಸ್ತೆಯ ಸ್ಥಳಕ್ಕೆ ತೆರಳಿ ವೀಕ್ಷಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಇಲ್ಲದ ಕಾರಣ, ನೀರು ರಸ್ತೆಯ ಮೇಲೆ ಹರಿಯುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಜೆಸಿಬಿ ಮೂಲಕ ರಸ್ತೆಯ ಒಂದು ಕಡೆ ಚರಂಡಿ ತೋಡಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದಾರೆ. ಇದರಿಂದಾಗಿ ರಸ್ತೆಯ ಮೇಲೆ ಹರಿಯುತ್ತಿದ್ದಂತ ನೀರು, ಚರಂಡಿ ಮೂಲಕ ಹರಿದು ಸಮಸ್ಯೆ ಸರಿಪಡಿಸಿದ್ದಾರೆ.
ಈ ಬಗ್ಗೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಬದನಗದ್ದೆಯ ಮಠದ ರಸ್ತೆಯಲ್ಲಿ ಒಂದಷ್ಟು ದೂರ ಸಿಸಿ ರಸ್ತೆಯಾಗಿದೆ. ಇನ್ನೂ ಮಠದವರೆಗೆ ಪೂರ್ತಿಯಾಗಿಲ್ಲ. ಇದರಿಂದಾಗಿ ಭಾರೀ ಮಳೆಯಾದಾಗ ನೀರು ರಸ್ತೆಯಲ್ಲಿ ಹರಿದು ಜನರಿಗೆ ಓಡಾಡೋದಕ್ಕೆ ಸಮಸ್ಯೆ ಆಗುತ್ತಿದೆ. ಇಂದು ಚರಂಡಿ ತೋಡಿಸಿ, ನೀರು ಚರಂಡಿ ಮೂಲಕ ಹರಿದು ಹೋಗುವಂತೆ ಮಾಡಿದ್ದರಿಂದ ಸಮಸ್ಯೆ ಪರಿಹರಿಸಲಾಗಿದೆ ಎಂದರು.
ಕೆಳದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಬೈಲು ಮನೆಯ ಗೋಡೆ ಬಿದ್ದಿದೆ. ಶಾಸಕರಿಂದಲೂ ಸಹಾಯ ಧನ ನೀಡಲಾಗಿದ್ದು, ಗ್ರಾಮ ಪಂಚಾಯ್ತಿ ವತಿಯಿಂದಲೂ ನೆರವು ನೀಡಲಾಗಿದೆ. ತೆರವಿನ ಕೊಪ್ಪದಲ್ಲಿ ಕಾಲುವೆ ಒಡೆದು ಜಮೀನಿನ ಮೂಲಕ ನೀರು ಹರಿದ ಪರಿಣಾಮ ಬೆಳೆ ನಾಶವಾಗಿದೆ. ಕೆಳದಿಯಲ್ಲೂ ಇದೇ ರೀತಿ ಆಗಿದೆ. ಕೆಳದಿ ಪುರದಲ್ಲೂ ಕಾಲುವೆಯ ನೀರು ಜಮೀನಿನಲ್ಲಿ ಹರಿದು ಬೆಳೆ ಹಾನಿಯಾಗಿದೆ. ಅವೆಲ್ಲವನ್ನು ಪರಿಶೀಲಿಸಲಾಗಿದ್ದು, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ, ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡಲಾಗುತ್ತದೆ ಎಂಬುದಾಗಿ ಹೇಳಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಬೆಂಗಳೂರು: ಜು.24ರ ನಾಳೆ, ಜು.25ರ ನಾಡಿದ್ದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ, ಸುಭದ್ರ ಬಜೆಟ್: ಆರ್.ಅಶೋಕ್ | Union Budget 2024