ಶಿವಮೊಗ್ಗ : ಸಾಕುಪ್ರಾಣಿಗಳನ್ನು ಅತಿ ಎಚ್ಚರಿಕೆಯಿಂದ ಸಾಕಬೇಕು. ಕಾಲಕಾಲಕ್ಕೆ ಅವುಗಳಿಗೆ ಬೇಕಾದ ಚಿಕಿತ್ಸೆ ಕೊಡಿಸಿದರೆ ಅವುಗಳಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪಶು ವೈದ್ಯಕೀಯ ಇಲಾಖೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮನೆಯಲ್ಲಿ ಸ್ನೇಹದಿಂದ ಕುಟುಂಬದ ಸದಸ್ಯರಂತೆ ಇರುತ್ತದೆ. ಮನುಷ್ಯರಂತೆ ಅವುಗಳಿಗೂ ಕಾಯಿಲೆಗಳ ಬರುತ್ತದೆ. ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ರೇಬಿಸ್‌ಗೆ ಸಾಕುಪ್ರಾಣಿಗಳು ಒಳಗಾದರೆ ಸಾಕಿದವರಿಗೂ ಅಪಾಯ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಚುಚ್ಚುಮದ್ದು ಅಭಿಯಾನ ಹಮ್ಮಿಕೊಂಡಿದ್ದು, ಸಾಕುಪ್ರಾಣಿಗಳನ್ನು ಹೊಂದಿರುವವರು ಉಪಯೋಗಿಸಬೇಕು ಎಂದು ಹೇಳಿದರು.
ಪಶು ವೈದ್ಯಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಮುಂದಿನ ಒಂದು ತಿಂಗಳು ಸಾಕು ಪ್ರಾಣಿಗಳಿಗೆ ಉಚಿತ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಬೆಳಿಗ್ಗೆ 9 ರಿಂದ ಚುಚ್ಚುಮದ್ದು ಕೊಡಲು ಪ್ರಾರಂಭವಾಗುತ್ತದೆ. ಇಂದು ಸುಮಾರು 80 ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಕುಸುಮ ಸುಬ್ಬಣ್ಣ, ಗಣೇಶ್ ತುಮರಿ, ಸುದರ್ಶನ, ಹೊಳೆಯಪ್ಪ, ಡಾ. ಆಕಾಶ್, ಸುದೇಶ್ ಇನ್ನಿತರರು ಹಾಜರಿದ್ದರು.