ಬೆಂಗಳೂರು: ಮುಖ್ಯಮಂತ್ರಿಗಳೇ ನೇಮಿಸುವ ಐಎಎಸ್ ಅಧಿಕಾರಿಯಾದ ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಕೆಪಿಎಸ್ಸಿ ಪರೀಕ್ಷೆಗಳನ್ನು ನಿಭಾಯಿಸುತ್ತಾರೆ. ಆದ್ದರಿಂದ ಕೆಪಿಎಸ್ಸಿ ಪರೀಕ್ಷಾ ವೈಫಲ್ಯದ ಜವಾಬ್ದಾರಿಯನ್ನು ಸ್ವತಃ ಮುಖ್ಯಮಂತ್ರಿಗಳೇ ಹೊರಬೇಕಾಗುತ್ತದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿ ವ್ಯವಸ್ಥೆಯನ್ನು ಸರಿ ಮಾಡುವ ದೃಷ್ಟಿಯಿಂದ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು. ಪರೀಕ್ಷಾ ಅಕ್ರಮ ದೊಡ್ಡ ಪ್ರಮಾಣದಲ್ಲಿದೆ. ಅದನ್ನು ತಡೆಯಲು ಸಾಕಷ್ಟು ಕಠಿಣ ಕಾನೂನುಗಳನ್ನು ರೂಪಿಸುವ ಕೆಲಸವನ್ನು ಹಿಂದಿನ ಸರಕಾರ ಮಾಡಿದೆ ಎಂದರು.
ಕರ್ನಾಟಕದಲ್ಲಿ ಈಗ ತನಿಖೆ ಎಂದರೆ ಪ್ರಹಸನ ಎಂಬಂತಾಗಿದೆ. ಮಾತೆತ್ತಿದರೆ ಎಸ್‍ಐಟಿ, ಸಿಐಡಿ ಎನ್ನುತ್ತಿದ್ದಾರೆ. ಸ್ವತಂತ್ರ ನ್ಯಾಯಾಂಗದ ಸುಪರ್ದಿಯಲ್ಲಿ ತನಿಖೆ ನಡೆಯಬೇಕು ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಕಾನೂನಿನ ಭಯವೇ ಇರದ ವ್ಯಕ್ತಿಗಳು ನಿರ್ಮಾಣವಾಗಿದ್ದಾರೆ. ಕೆಪಿಎಸ್ಸಿಗೆ ಕಾಯಕಲ್ಪ ಕೊಡಲು ಸಮಗ್ರ ತೀರ್ಮಾನ ಕೈಗೊಳ್ಳುವ ಕಾಲ ಈಗ ಬಂದಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಯಾವುದೇ ಪರೀಕ್ಷೆಯನ್ನು ಯಾವುದೇ ಏಜೆನ್ಸಿಯಿಂದ ನಡೆಸಿದರೆ ಕನಿಷ್ಠ 4-5 ವರ್ಷ ಬೇಕೆಂಬ ಸ್ಥಿತಿಯಾದರೆ, ಗತಿ ಏನು ಹೇಳಿ ಎಂದು ಪ್ರಶ್ನಿಸಿದರು.
ದುಷ್ಟರ ಜೊತೆ ಕೆಲಸ ಮಾಡುವ ಒತ್ತಡ..
ಕರ್ನಾಟಕದ ಪೊಲೀಸ್ ವ್ಯವಸ್ಥೆ ಅತ್ಯಂತ ದಕ್ಷತೆಯಿಂದ ಕೂಡಿದೆ. ರಾಜೀವ್ ಗಾಂಧಿ ಹತ್ಯೆ ಮಾಡಿದವರನ್ನೇ ಹಿಡಿಯುವ ಸಮರ್ಥರಿದ್ದಾರೆ. ದುಷ್ಟರ ಆಡಳಿತದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಅವರಿಗೆ ಬಂದಿದೆ. ದುಷ್ಟರ ಜೊತೆ ಕೆಲಸ ಮಾಡುವ ಒತ್ತಡದಲ್ಲಿ ಪೊಲೀಸರು ಇದ್ದಾರೆ. ಹಾಲಿ ನ್ಯಾಯಾಧೀಶರ ಸುಪರ್ದಿಯಲ್ಲಿ ತನಿಖೆ ನಡೆಸುವುದೇ ಸೂಕ್ತ ಎಂದು ಅರುಣ್ ಶಹಾಪುರ ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ಐದೈದು ವರ್ಷಕ್ಕೆ ಒಂದು ನೇಮಕಾತಿ ನಡೆದರೆ ರಾಜ್ಯ ಸರಕಾರ ಈ ವಿಷಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ನುಡಿದರು. ಕರ್ನಾಟಕದಲ್ಲಿ ಗುಣಮಟ್ಟ, ಜನಕಲ್ಯಾಣಕ್ಕಿಂತ ಹೆಚ್ಚು ರಾಜಕೀಯ ದೃಷ್ಟಿಕೋನದಿಂದ ಈ ಕಾರ್ಯದರ್ಶಿ, ಪರೀಕ್ಷಾ ನಿಯಂತ್ರಣಾಧಿಕಾರಿ ನೇಮಕ ಆಗುತ್ತದೆ. ಪರೀಕ್ಷೆಯಲ್ಲಿ ಚಯರ್‍ಮ್ಯಾನ್, ಸದಸ್ಯರ ಹಸ್ತಕ್ಷೇಪವೇನೂ ಇಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ಪ್ರೊಬೆಷನರಿ ಕೆಎಎಸ್ ಸುಮಾರು 384 ಹುದ್ದೆಗಳಿಗೆ ಪರೀಕ್ಷೆಗಳು ಈಚೆಗೆ ನಡೆದಿವೆ. 2 ಲಕ್ಷದ 20 ಸಾವಿರ ಆಕಾಂಕ್ಷಿಗಳುÀ ಪರೀಕ್ಷೆಗೆ ಸಂಬಂಧಿಸಿ ಅರ್ಜಿ ಹಾಕಿದ್ದಾರೆ. 1.30 ಲಕ್ಷದಷ್ಟು ಜನ ಮೊದಲನೇ ಬಾರಿ ಪರೀಕ್ಷೆ ಬರೆದಿದ್ದರು. ಕೆಪಿಎಸ್ಸಿ ಗೊಂದಲದಿಂದ ಮತ್ತೊಮ್ಮೆ ಪರೀಕ್ಷೆ ನಡೆಸಬೇಕಾಯಿತು. ಭಾಷಾಂತರದ ಸಮಸ್ಯೆಯಿಂದ ಇನ್ನೊಮ್ಮೆ ಪರೀಕ್ಷೆ ನಡೆಸಲು ಸ್ವತಃ ಮುಖ್ಯಮಂತ್ರಿಗಳೇ ಸೂಚಿಸಬೇಕಾಯಿತು ಎಂದು ವಿವರಿಸಿದರು. ಈ ಬಾರಿ 1 ಲಕ್ಷ 5 ಸಾವಿರ ಜನರು ಪರೀಕ್ಷೆಗೆ ಹಾಜರಾಗಿದ್ದರು ಎಂದು ವಿವರ ನೀಡಿದರು.
ಮೊದಲ ಪರೀಕ್ಷೆಗೆ ಶೇ 62ರಷ್ಟು ಜನರು ಪರೀಕ್ಷೆಗೆ ಹಾಜರಾದರೆ, ಮರು ಪರೀಕ್ಷೆ ವೇಳೆ ಅದು ಶೇ 48ಕ್ಕೆ ಕುಸಿದಿದೆ. ಕರ್ನಾಟಕದ ಕೆಪಿಎಸ್ಸಿ ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಆಕ್ಷೇಪಿಸಿದರು. ಒ.ಎಮ್.ಆರ್ ಶೀಟ್‍ನಲ್ಲಿ ಕೈಬರಹದ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದು ತಮಗೆ ಬೇಕಾದವರನ್ನು ಕೆ.ಎ.ಎಸ್ ಅಧಿಕಾರಿಗಳನ್ನಾಗಿ ಮಾಡುವ ಹುನ್ನಾರ ಅಡಗಿದೆ ಎಂದು ಅವರು ಆರೋಪಿಸಿದರು.
ಮರುಪರೀಕ್ಷೆ ಯಾಕೆ ಎಂದು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ಸದನದಲ್ಲಿ ಪ್ರಶ್ನಿಸಿದ್ದರು. ಮುಖ್ಯಮಂತ್ರಿಗಳು ಉತ್ತರ ನೀಡಿದ್ದು, ಆಯೋಗವು 2021ನೇ ಸಾಲಿನಲ್ಲಿ ಪ್ರಶ್ನೆಗಳ ಸೋರಿಕೆಯ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಉಪ ಸಮಿತಿಯ ಭಾಷಾಂತರಕಾರರು ಭಾಷಾಂತರಿಸಿದ ಪ್ರಶ್ನೆಗಳನ್ನು ಗೌಪ್ಯ ಶಾಖೆಯ ಅಧಿಕಾರಿ, ಸಿಬ್ಬಂದಿಗಳು ನೋಡುವ ಅವಕಾಶ ಇರಬಾರದೆಂದು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸದರಿ ಪ್ರಶ್ನೆಗಳನ್ನು ಆಯೋಗದಿಂದ ಪರಿಶೀಲಿಸಿಲ್ಲ ಎಂದಿದ್ದಾರೆ.
ಪ್ರಶ್ನೆಗಳನ್ನು ಯಾರೂ ನೋಡದೆ ಮುದ್ರಣಕ್ಕೆ ಕಳಿಸಿದ್ದೇವೆ. ಪರೀಕ್ಷಾರ್ಥಿಗಳಿಗೆ ಅದನ್ನೇ ನೀಡಿದ್ದು ಗೊಂದಲ ಆಗಿದೆ ಎಂದು ತಿಳಿಸಿದ್ದಾರೆ ಎಂದು ಟೀಕಿಸಿದರು.
ಸ್ವತಃ ಮುಖ್ಯಮಂತ್ರಿಗಳೇ ಹೇಳಿ ಮರುಪರೀಕ್ಷೆ ಮಾಡುವಾಗ ಅದೇ ತಪ್ಪಾದರೆ ಇವರಿಗೆ ಏನೆನ್ನಬೇಕು ಎಂದು ಪ್ರಶ್ನಿಸಿದರು. ಎಡವಿದ ಕಲ್ಲಿಗೇ ಇನ್ನೊಮ್ಮೆ ಎಡವಿದರೆ ನಾವು ಏನು ಹೇಳಬೇಕು ಎಂದು ಕೇಳಿದರು. ಎರಡನೇ ಬಾರಿಯೂ ವೈಫಲ್ಯ, ಅದೇ ತಪ್ಪಾದರೆ ಅದು ನಿಮ್ಮ ವೈಫಲ್ಯವಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆ ಮಾಡಿದರು. ಕೆಪಿಎಸ್ಸಿಗೆ ಒಬ್ಬರು ಚಯರ್‍ಮ್ಯಾನ್, ಹಲವಾರು ಸದಸ್ಯರಿದ್ದಾರೆ. ಅವರೆಲ್ಲರಿಗೂ ಈ ಎಲ್ಲ ಸಂಗತಿಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂದು ತಿಳಿಸಿದರು.
ಪರೀಕ್ಷೆ ಎಂಬ ಮುಗಿಯದ ಕಥೆ
ರಾಜ್ಯದಲ್ಲಿ ನೇಮಕಾತಿಗಾಗಿ ಪರೀಕ್ಷೆ ಎಂದರೆ ಅದು ಮುಗಿಯದ ಕಥೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಯುಪಿಎಸ್ಸಿ, ಕೆಪಿಎಸ್ಸಿ ನೇಮಕಾತಿಗಳು ಅತ್ಯಂತ ಮಹತ್ವಪೂರ್ಣ. ದೇಶದ ಅಭಿವೃದ್ಧಿ, ಆಡಳಿತ ವ್ಯವಸ್ಥೆ ಮೇಲೆ ದೊಡ್ಡ ಪರಿಣಾಮ ಬೀರುವ ಯುಪಿಎಸ್ಸಿ, ಕೆಪಿಎಸ್ಸಿ ನೇಮಕಾತಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿರಬೇಕೆಂದು ಗಂಭೀರವಾಗಿ ಪರಿಗಣಿಸಲಾಗಿತ್ತು ಎಂದರು.
ಯುಪಿಎಸ್ಸಿ ಮೊರೆ ಹೋಗಲು ಪಿ.ರಾಜೀವ್ ಆಗ್ರಹ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಮಾತನಾಡಿ, ಯುಪಿಎಸ್ಸಿ ಪ್ರಾಮಾಣಿಕವಾಗಿ ಪರೀಕ್ಷೆ ನಡೆಸುತ್ತದೆ. ಕೆಪಿಎಸ್ಸಿ ಸೋತು ಹೋಗಿದೆ; ನೀವೇ ಇದರಲ್ಲಿನ ಗೊಂದಲಗಳ ತನಿಖೆ ಮಾಡಿ ಎಂದು ಸರಕಾರವು ಯುಪಿಎಸ್ಸಿಗೆ ಶರಣಾಗಬೇಕಿದೆ ಎಂದು ವಿನಂತಿಸಿದರು.
ಪರೀಕ್ಷಾರ್ಥಿಗಳು ಸರಕಾರಿ ನೌಕರಿಯ ನಂಬಿಕೆಯಿಂದ ಪರೀಕ್ಷಾ ಶುಲ್ಕ ಕಟ್ಟಿದ್ದು, ಅದನ್ನು ಬಡ್ಡಿ ಸೇರಿಸಿ ಎಲ್ಲ ಅಭ್ಯರ್ಥಿಗಳಿಗೆ ವಾಪಸ್ ಕೊಡಬೇಕೆಂದು ಅವರು ಒತ್ತಾಯಿಸಿದರು. ಬಿಜೆಪಿ ರಾಜ್ಯ ವಕ್ತಾರ ಅಶೋಕ್ ಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಸ್ವ ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನ
BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ನೀರಿನ ದರ ಏರಿಕೆ ಬಹುತೇಕ ಫಿಕ್ಸ್ : ಜ.2ನೇ ವಾರ ದರ ಏರಿಕೆ ಸಾಧ್ಯತೆ!