ಬೆಂಗಳೂರು: ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆ-3ರ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಪರೀಕ್ಷೆ ಬರೆದಂತ ವಿದ್ಯಾರ್ಥಿಗಳು ಹೇಗೆ ರಿಸಲ್ಟ್ ಚೆಕ್ ಮಾಡಬೇಕು ಎನ್ನುವ ಬಗ್ಗೆ ಮುಂದೆ ಓದಿ.
ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು ಆಗಸ್ಟ್ 2024ರ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ-3ರ ಪರೀಕ್ಷೆಯನ್ನು ದಿನಾಂಕ:02.08.2024 ರಿಂದ 09.08.2024 ರವರೆಗೆ ನಡೆಸಲಾಯಿತು ಎಂದು ತಿಳಿಸಿದೆ.
ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾದ ಹಿನ್ನಲೆಯಲ್ಲಿ, ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂಬುದಾಗಿ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಹೇಳಿದೆ.
ಈ ರೀತಿ SSLC ಪರೀಕ್ಷೆ-3ರರ ಫಲಿತಾಂಶ ಚೆಕ್ ಮಾಡಿ
ಇದೀಗ ಬಿಡುಗಡೆಯಾಗಿರುವಂತ ಎಸ್ ಎಸ್ ಎಲ್ ಸಿ ಪರೀಕ್ಷೆ-3ರ ಫಲಿತಾಂಶವನ್ನು ವಿದ್ಯಾರ್ಥಿಗಳು https://karresults.nic.in ಜಾಲತಾಣಕ್ಕೆ ಭೇಟಿ ನೀಡಿ, ವೀಕ್ಷಿಸಬಹುದಾಗಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ-3ಕ್ಕೆ 97,952 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 25,347 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಲಿಂಗವಾರು ಪ್ರಮಾಣ ನೋಡುವುದಾದರೇ 67729 ವಿದ್ಯಾರ್ಥಿಗಳು ಹಾಜರಾಗಿದ್ದರೇ, 16,764 ಮಂದಿ ಪಾಸ್ ಆಗಿದ್ದಾರೆ. ವಿದ್ಯಾರ್ಥಿನಿಯರು 30223 ಹಾಜರಾಗಿದ್ದರು, ಇವರಲ್ಲಿ 8583 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 26-08-2024 ರಿಂದ 30-08-2024ರವರೆಗೆ ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಗೆ 26-08-2024 ರಿಂದ 31-08-2024ರವರೆಗೆ ಅವಕಾಶವಿದೆ. ಉತ್ತರ ಪತ್ರಿಕೆಗಳ ಮರು ಏಣಿಕೆಗೆ ಮತ್ತು ಮರು ಮೌಲ್ಯಮಾಪನಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 31-08-2024ರಿಂದ 04-09-2024ರವರೆಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ಶುಲ್ಕವನ್ನು ಪಾವತಿಸಲು ದಿನಾಂಕ 31-08-2024ರಿಂದ 05-09-2024ರವರೆಗೆ ಅವಕಾಶ ನೀಡಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು