ಬೆಂಗಳೂರು: ರಾಜ್ಯದ ವಿವಿಧೆಡೆ ಮಂಗಳವಾರ ಸುರಿದ ಭೀಕರ ಆಲಿಕಲ್ಲು ಮಳೆಯಿಂದಾಗಿ ಕರ್ನಾಟಕದ ಹಲವು ಭಾಗಗಳು ಹಿಮಾವೃತಗೊಂಡ ಕಾಶ್ಮೀರದಂತೆ ಭಾಸವಾಗುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 17 ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ವಿಕೋಪಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಯುಗಾದಿ ಹಬ್ಬಕ್ಕೂ ಮುನ್ನವೇ ಸುರಿದ ಈ ಅಕಾಲಿಕ ಮಳೆಯು ಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ತಂಪು ನೀಡಿದೆಯಾದರೂ, ರೈತರ ಪಾಲಿಗೆ ಕಣ್ಣೀರ ತರಿಸಿದೆ. ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ ಮತ್ತು ಮಾವು ಕೊಯ್ಲಿಗೆ ಬರುವ ಹಂತದಲ್ಲಿದ್ದು, ಆಲಿಕಲ್ಲು ಮಳೆಯಿಂದಾಗಿ ಅವು ಉದುರಿ ಹೋಗುತ್ತಿವೆ.
ಮಾವು, ದ್ರಾಕ್ಷಿ, ದಾಳಿಂಬೆ ಮತ್ತು ಕಾಫಿ ಬೆಳೆಗಳಿಗೆ ತೀವ್ರ ಹಾನಿಯಾಗುವ ಆತಂಕ ಎದುರಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳದಲ್ಲಿ ಸಿಡಿಲು ಬಡಿದು ನಿಂಗಪ್ಪ ರಾಮಪ್ಪ ಅಮಾತಿ (58) ಎಂಬ ರೈತ ಹಾಗೂ ಬೆಳಗಾವಿ ಜಿಲ್ಲೆಯ ಹೊಸೂರಿನಲ್ಲಿ ಮನೆಯ ಗೋಡೆ ಕುಸಿದು ಪರ್ವೀನ್ (34) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ಬೆಂಗಳೂರು, ಬೆಳಗಾವಿ, ವಿಜಯಪುರ, ವಿಜಯನಗರ, ಧಾರವಾಡ, ಚಾಮರಾಜನಗರ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿತ್ತು.
ಕಲಘಟಗಿ, ಹುಬ್ಬಳ್ಳಿ ಮತ್ತು ಕುಂದಗೋಳ ಭಾಗಗಳಲ್ಲಿ ಅತಿಯಾದ ಆಲಿಕಲ್ಲು ಬಿದ್ದಿದ್ದರಿಂದ ರಸ್ತೆಗಳು ಮತ್ತು ಹೊಲಗಳು ಬಿಳಿ ಬಣ್ಣದ ಹಿಮದ ಹಾಸಿನಂತೆ ಕಂಡುಬಂದವು. ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಹಾವೇರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿರುಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.








