ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದ ಬಿಜೆಪಿ ಬಂಡಾಯ ಶಾಸಕರು ಸೋಮವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ
ಈ ಕುರಿತು ಮಾತನಾಡಿದ ಬಣದ ಹಿರಿಯ ಮುಖಂಡರೊಬ್ಬರು, ‘ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರು ಪಕ್ಷದ ಹೈಕಮಾಂಡ್ ಭೇಟಿ ಮಾಡಿ ವಿಜಯೇಂದ್ರ ಬದಲಿಗೆ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಬಲ್ಲ ನಾಯಕನನ್ನು ನೇಮಿಸುವಂತೆ ಮನವಿ ಮಾಡಲು ಬಯಸಿದ್ದಾರೆ
ವಿಜಯೇಂದ್ರ ಅವರ ನಿರಂಕುಶ ವರ್ತನೆಯಿಂದ ನಾವು ಬೇಸತ್ತಿದ್ದೇವೆ. ಆದ್ದರಿಂದ, ನಾವು ಅವರನ್ನು ಬದಲಾಯಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ… ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆ ನಡೆಸಲು ರಾಜ್ಯ ಘಟಕಕ್ಕೆ ಅವಕಾಶ ನೀಡುವಂತೆ ನಾವು ಕೇಂದ್ರ ನಾಯಕರನ್ನು ಒತ್ತಾಯಿಸುತ್ತೇವೆ” ಎಂದು ಮೂಲಗಳು ತಿಳಿಸಿವೆ.
ಪಕ್ಷದ ಕೇಂದ್ರ ನಾಯಕರನ್ನು ಭೇಟಿ ಮಾಡುವ ಮೊದಲು, ಯತ್ನಾಳ್ ಮತ್ತು ಇತರರು ಸಂಸದರೊಂದಿಗೆ ಮಾತುಕತೆ ನಡೆಸಲಿದ್ದು, ‘ತಟಸ್ಥ’ ಮತ್ತು ಯತ್ನಾಳ್ ತಂಡಕ್ಕೆ ಒಪ್ಪುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ