ಬೆಂಗಳೂರು: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಹ ಆರ್ಯವೈಶ್ಯ ಸಮಾಜದವರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಸ್ವಯಂ ಉದ್ಯೋಗ ನೇರ ಸಾಲ, ಆರ್ಯವೈಶ್ಯ ಆಹಾರ ವಾಹಿನಿ ಹಾಗೂ ವಾಸವಿ ಜಲಶಕ್ತಿ ಯೋಜನೆಗಳಿಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ಆನ್‍ಲೈನ್ ವೆಬ್‍ಸೈಟ್ www.kacdc.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
*ಸ್ವಯಂ –ಉದ್ಯೋಗ ನೇರಸಾಲ ಯೋಜನೆ:*
ಕರ್ನಾಟಕ ಆರ್ಯವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದಿಂದ ವ್ಯಾಪಾರ ಚಟುವಟಿಕೆ ಕೈಗೊಳ್ಳಲು ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ರೂ.1 ಲಕ್ಷಗಳ ಸಾಲ-ಸಹಾಯ ಧನ ನೀಡಲಾಗುತ್ತಿದ್ದು, ಇದರಲ್ಲಿ ರೂ.20 ಸಾವಿರ ಸಹಾಯಧನವಿರುತ್ತದೆ. ಬಾಕಿ ಮೊತ್ತವನ್ನು ಶೇ.4ರ ಬಡ್ಡಿ ದರದಲ್ಲಿ ನೀಡಲಾಗುವುದು.ವಯೋಮಿತಿಯು 45 ವರ್ಷಗಳಿಂದ 55 ವರ್ಷಗಳಿಗೆ ಹೆಚ್ಚಿಸಲಾಗಿದ್ದು, 2019-20 ಮತ್ತು 2020-21 ಸಾಲಿನ ಫಲಾನುಭವಿಗಳು ಪಡೆದ ಸಾಲವನ್ನು ನಿಗಧಿತ ಕಾಲ ಮಿತಿಯೊಳಗೆ ಮರು ಪಾವತಿಸಿದಲ್ಲಿ ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
*ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ:*
ನೂತನ ಯೋಜನೆಯಾದ ಆರ್ಯವೈಶ್ಯ ಆಹಾರ ವಾಹಿನಿ ಪಡೆಯಲು ಅಭ್ಯರ್ಥಿಯು ಹಳದಿ ಫಲಕವುಳ್ಳ ಆಟೋ, ಟ್ರಕ್, ಕಾರ್ ಇತ್ಯಾದಿಗಳನ್ನು ಖರೀದಿಸಬಹುದು.
ಅರ್ಜಿದಾರರು ಯಾವುದಾದರೂ ಬ್ಯಾಂಕ್‍ನಲ್ಲಿ ಸಾಲ ಪಡೆಯಬಹುದು ಹಾಗೂ ನಿಗಮದಿಂದ ರೂ.1ಲಕ್ಷಗಳವರೆಗೆ ಸಬ್ಸಿಡಿ ನೀಡಲಾಗುತ್ತದೆ. ಫಲಾನುಭವಿಗಳು ಯಾವುದಾದರು ವಾಹನವನ್ನು ಫ್ಯಾಬ್ರಿಕೇಷನ್ ಮಾಡಿ ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿದ್ದಲ್ಲಿ ಹೆಚ್ಚುವರಿಯಾಗಿ ರೂ.100ಲಕ್ಷಗಳ ಸಹಾಯ ಧನ ನೀಡಲಾಗುತ್ತದೆ.
*ವಾಸವಿ ಜಲಶಕ್ತಿ ಯೋಜನೆ*:
ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ವಾಸವಿ ಜಲಶಕ್ತಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ವಯೋಮಿತಿಯು 50 ರಿಂದ 55 ರವರೆಗೆ ಹೆಚ್ಚಿಸಲಾಗಿದೆ. ರೈತರು ಕನಿಷ್ಠ 2 ರಿಂದ ಗರಿಷ್ಟ 15 ಎಕರೆ ಜಮೀನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ಆಯಾ ಜಿಲ್ಲಾ ಅಧಿಕಾರಿಗಳನ್ನು ಸಂಪರ್ಕ ಮಾಡಬಹುದಾಗಿದೆ.