ಹುಬ್ಬಳ್ಳಿ:ಕರಸೇವಕ, ಶ್ರೀಕಾಂತ್ ಪೂಜಾರಿ ಬಂಧನದ ಹಿಂದೆ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶುಕ್ರವಾರ ಆರೋಪಿಸಿದ್ದಾರೆ.
‘ಕರ್ನಾಟಕದಲ್ಲಿ ಬಿಜೆಪಿ 7ರಿಂದ 8 ವರ್ಷ ಅಧಿಕಾರದಲ್ಲಿದ್ದರೆ ಆರ್.ಅಶೋಕ 5 ವರ್ಷ ಗೃಹ ಸಚಿವರಾಗಿದ್ದರು. ಕರಸೇವಕನ ಮೇಲಿನ ಕೇಸ್‌ಗಳನ್ನು ಏಕೆ ವಾಪಸ್ ತೆಗೆದುಕೊಳ್ಳಲಿಲ್ಲ? ಕರಸೇವಕನ ಬಗ್ಗೆ ಇಷ್ಟೆಲ್ಲಾ ವಿವಾದವನ್ನು ಲೋಕಸಭೆ ಚುನಾವಣೆಗಾಗಿ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪಾತ್ರವಿದೆ. ಪೂಜಾರಿ ಬಂಧನದ ಹಿಂದೆ ಅವರ ಕೈವಾಡವಿದೆ’ ಎಂದು ಶೆಟ್ಟರ್ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಬಿಜೆಪಿ ಈಗ ಏಕೆ ಪ್ರತಿಭಟನೆ ನಡೆಸುತ್ತಿದೆ ಎಂದು ಪ್ರಶ್ನಿಸಿದ ಅವರು, ಅಧಿಕಾರದಲ್ಲಿದ್ದಾಗ ಈ ಪ್ರಕರಣಗಳನ್ನು ಹಿಂಪಡೆಯಲು ಯಾವುದೇ ಪ್ರಯತ್ನ ಮಾಡಲಿಲ್ಲ. ‘ಹತ್ತು ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ಕರಸೇವಕನಿಗೆ ಸಹಾಯ ಮಾಡುವ ನನ್ನ ಪ್ರಯತ್ನಗಳು ದಾಖಲೆಗಳಲ್ಲಿವೆ,’ ಎಂದು ಅವರು ಹೇಳಿದರು.
ಕೇವಲ ಹಿಂದೂ ಮತಗಳನ್ನು ಪಡೆಯಲು ಬಿಜೆಪಿ ಇದೆಲ್ಲವನ್ನೂ ಮಾಡುತ್ತಿದೆ ಎಂದರು.
‘ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಮತ್ತು ಬಸವರಾಜ ಬೊಮ್ಮಾಯಿ ಇಷ್ಟು ದಿನ ಮೌನ ವಹಿಸಿದ್ದು ಏಕೆ? ಶ್ರೀಕಾತ್ ಪೂಜಾರಿ ಬಂಧನದ ನಂತರವೇ ಬಿಜೆಪಿಗೆ ಕರಸೇವಕನ ನೆನಪಾಯಿತು. ಕರಸೇವಕ ಬಂಧನದ ವಿಚಾರದಲ್ಲಿ ಬಿಜೆಪಿ ನಾಯಕರು ಬೂಟಾಟಿಕೆ ಮಾಡುತ್ತಿದ್ದಾರೆ. ಅವರಿಗೆ ರಾಮಭಕ್ತರ ಬಗ್ಗೆ ಯಾವುದೇ ಕಾಳಜಿ ಮತ್ತು ಸಹಾನುಭೂತಿ ಇಲ್ಲ’ ಎಂದು ಶೆಟ್ಟರ್ ಹೇಳಿದರು.
ಸರಕಾರದ ನಿರ್ದೇಶನದಂತೆ ಕರಸೇವಕನನ್ನು ಬಂಧಿಸಿಲ್ಲ ಎಂದರು.
‘ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸುವುದು ಬಿಜೆಪಿಯ ಉದ್ದೇಶ. 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿರುವ ಮಣಿಕಾಂತ್ ರಾಥೋಡ್‌ಗೆ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ನೀಡಿತ್ತು. ಭಾವನೆಗಳನ್ನು ಕೆರಳಿಸಿದರೂ ಬಿಜೆಪಿಗೆ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದು ಹೇಳಿದರು.