ಸಾಗರ : ಹೊರರಾಜ್ಯಗಳಿಂದ ಬರುವ ಐಎಎಸ್ ಐಪಿಎಸ್ ಅಧಿಕಾರಿಗಳು ಕನ್ನಡ ಕಲಿತು ಚನ್ನಾಗಿ ಮಾತನಾಡುತ್ತಾರೆ. ಕನ್ನಡಿಗರೆ ಆಗಿರುವ ಅಧಿಕಾರಿಗಳು ಕನ್ನಡ ಮಾತನಾಡಲು ಹಿಂದೆಮುಂದೆ ನೋಡುತ್ತಾರೆ. ಕನ್ನಡಿಗರು ಕನ್ನಡವನ್ನು ಗರ್ವದಿಂದ ಬಳಸುವ ಜೊತೆಗೆ ಉಳಿಸಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು.
ಮಂಗಳವಾರದಂದು ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರಿ ನೌಕರರ ಭವನದಲ್ಲಿ, ನೌಕರರ ಸಂಘದಿಂದ ಏರ್ಪಡಿಸಿದ್ದಂತ ಕನ್ನಡ ರಾಜ್ಯೋತ್ಸವ, ನೌಕರರ ಸಮಾವೇಶ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ಅವರು, ಕನ್ನಡ ಸುಂದರ ಭಾಷೆ. ಕಚೇರಿಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾದರೆ ರಾಜ್ಯದಲ್ಲಿ ಕನ್ನಡ ಭಾಷೆ ವಿಜೃಂಭಿಸುತ್ತಿದೆ. ಕನ್ನಡಿಗರು ಕನ್ನಡವನ್ನು ಗರ್ವದಿಂದ ಬಳಸುವ ಜೊತೆಗೆ ಉಳಿಸಬೇಕು. ಸರ್ಕಾರಿ ನೌಕರ ಸಂಘ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದು ಕಾರ್ಯಾಂಗ ಮತ್ತು ಶಾಸಕಾಂಗ ಒಟ್ಟಾಗಿ ನಡೆದರೆ ಸರ್ಕಾರದ ಯೋಜನೆಗಳನ್ನು ತಳಮಟ್ಟದ ಜನರಿಗೆ ತಲುಪಿಸಲು ಸಾಧ್ಯ ಎಂದರು.
ಸಾಗರ ತಾಲ್ಲೂಕಿನ ಅಧಿಕಾರಿ ನೌಕರರು ಜನರಿಗೆ ಉತ್ತಮ ಸೇವೆ ಕೊಡಿ. ಜನರ ಕೆಲಸ ಮಾಡಬೇಕು ಎನ್ನುವ ಹಂಬಲದೊಂದಿಗೆ ನಾವು ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುತ್ತೇವೆ. ಜನರಿಗೆ ಉತ್ತಮ ಕೆಲಸ ಮಾಡಿಕೊಡಬೇಕಾದರೆ ನಿಮ್ಮ ಸಹಕಾರ ಅಗತ್ಯ. ರಾಜ್ಯ ಸರ್ಕಾರ ಏಳನೇ ವೇತನ ಆಯೋಗ ಜಾರಿಗೆ ತರುವ ಮೂಲಕ ನೌಕರರ ಹಿತ ಕಾಯುವ ಕೆಲಸ ಮಾಡಿದೆ. ಹಳೆ ಪಿಂಚಣಿ ಯೋಜನೆ ಬಗ್ಗೆ ಸಹ ಸರ್ಕಾರ ಸಹಮತ ಹೊಂದಿದೆ. ನೌಕರರು ಉತ್ತಮ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಘನತೆ ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರು ಒತ್ತಡದ ನಡುವೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಭಾಷೆ ಬಳಸಲು ಹಿಂದೆಮುAದೆ ಆಗಬಹುದು. ಆದರೆ ಸರ್ಕಾರಿ ನೌಕರರ ಕನ್ನಡಾಭಿಮಾನ ಸದಾ ಸ್ಮರಣೀಯವಾದದ್ದು. ಸಾಗರದಲ್ಲಿ ಸಂಘಟನೆ ಇನ್ನಷ್ಟು ಗಟ್ಟಿಗೊಳ್ಳಬೇಕು. ಎನ್.ಪಿ.ಎಸ್. ಜಾರಿ, ಕೇಂದ್ರ ಮಾದರಿ ವೇತನ ಇನ್ನಿತರೆ ಬಗ್ಗೆ ಸಂಘವು ಹೋರಾಟ ರೂಪಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಒತ್ತಡ ತಂದು ಋತುಚಕ್ರ ರಜೆಯನ್ನು ಕೊಡಿಸಿದೆ. ಸರ್ಕಾರಿ ನೌಕರರ ಅನೇಕ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಜಾರಿಗೆ ತಂದಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಸಂತೋಷ ಕುಮಾರ್, ರಾಜ್ಯದಲ್ಲಿ NPS ರದ್ದತಿಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು NPS ರದ್ದುಗೊಳಿಸಿ, OPS ಜಾರಿಗೊಳಿಸಿ ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಬೇಕು. ರಾಜ್ಯಾಧ್ಯಕ್ಷರು ಇನ್ನಷ್ಟು ಪ್ರಬಲವಾಗಿ ಎನ್.ಪಿ.ಎಸ್. ಹೋರಾಟ ರೂಪಿಸಬೇಕು. ಇದಕ್ಕೆ ನಮ್ಮ ಸಂಘವು ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಸೇವೆಯಲ್ಲಿ ನೌಕರರ ಪಾತ್ರ ವಿಷಯ ಕುರಿತು ಡಾ. ಬಿ.ಸಿ.ದಾದಾಪೀರ್ ಮಾತನಾಡಿದರು.
ಈ ವೇಳೆ ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಆರ್., ಎಸ್.ಬಸವರಾಜ್, ಮಧುಕೇಶವ ಇನ್ನಿತರರು ಹಾಜರಿದ್ದರು. ನೇತ್ರಾವತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅಣ್ಣಪ್ಪ ಡಿ.ಕೆ. ಸ್ವಾಗತಿಸಿದರು. ಸುರೇಶ್ ಜಂಬಾನಿ ನಿರೂಪಿಸಿದರು.








