ಕೆಎನ್‌ಎನ್‌ಸಿನಿಮಾಡೆಸ್ಕ್: ಕೇಂಜ ಚೇತನ್ ಕುಮಾರ್ ನಿರ್ದೇಶನದ `ಚೌ ಚೌ ಬಾತ್’ ಚಿತ್ರದ ಟ್ರೈಲರ್ ಆಗಿದೆ. ಇಂದು ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರದ ಎಸ್ ಆರ್ ವಿ ಥಿಯೇಟರ್ ನಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಈ ಟ್ರೈಲರ್ ಅನ್ನು ಚಿತ್ರದ ನಿರ್ಮಾಪಕರಾದ ಸತೀಶ್ ಎಸ್.ಬಿ ತಮ್ಮ ಧರ್ಮಪತ್ನಿಯೊಂದಿಗೆ ಲೋಕಾರ್ಪಣೆಗೊಳಿಸಿದ್ದಾರೆ.
ಬಿಗ್ ಬಾಸ್‍ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಅವಿನಾಶ್ ಶೆಟ್ಟಿ ಈ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಇನ್ನುಳಿದಂತೆ ಗೀತಸಾಹಿತಿ ಪ್ರಮೋದ್ ಮರವಂತೆ, ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್, ಛಾಯಾಗ್ರಾಹಕ ರುದ್ರಮೂರ್ತಿ ಬೆಳಗೆರೆ, ಸಾಗರ್ ಗೌಡ, ಪ್ರಕರ್ಷ ಶಾಸ್ತ್ರಿ, ಗೀತಾ ಬಂಗೇರ, ಹರ್ಷವರ್ಧನ್, ಪ್ರಸಾದ್, ನಿಶಾಂತ್ ಶೆಟ್ಟಿ ಸೇರಿದಂತೆ ಚಿತ್ರತಂಡ ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿತ್ತು. ಈಗೊಂದಷ್ಟು ಕಾಲದಿಂದ ಚೌ ಚೌ ಬಾತ್ ಚಿತ್ರ ಸುದ್ದಿ ಕೇಂದ್ರದಲ್ಲಿದೆ. ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ನಿರೀಕ್ಷೆ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ. ಈ ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕ ಕೇಂಜ ಚೇತನ್ ಕುಮಾರ್ ಅಂಥಾ ವಿಶೇಷವಾದ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ, ಚೌ ಚೌ ಬಾತ್ ಕನ್ನಡದ ಮಟ್ಟಿಗೆ ಅನೇಕ ಮೊದಲುಗಳನ್ನು, ಹೊಸತನವನ್ನು ಬಚ್ಚಿಟ್ಟುಕೊಂಡಿರುವ ಸಿನಿಮಾ. ಅದು ಕನ್ನಡದ ಮೊಟ್ಟ ಮೊದಲ ಹೈಪರ್ ಲಿಂಕ್ ರಾಮ್ ಕಾಮ್ ಮಾದರಿಯ ಚಿತ್ರವೆಂಬ ಮಾಹಿತಿಯನ್ನೂ ಕೂಡಾ ನಿರ್ದೇಶಕರು ತೆರೆದಿಟ್ಟಿದ್ದಾರೆ. ಸನಾತನಯ್ ಪಿಕ್ಚರ್ಸ್ ಮತ್ತು ಕಾಮಧೇನು ಫಿಲಂಸ್ ಅರ್ಪಿಸುವ ಈ ಚಿತ್ರ ,ಹಾರಿಜಾನ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮೂರ್ತಿ ಬೆಳಗೆರೆ ಛಾಯಾಗ್ರಹಣ, ಪ್ರಮೋದ್ ಮರವಂತೆ ಗೀತ ಸಾಹಿತ್ಯವಿರುವ ಈ ಚಿತ್ರದ ಸಂಕಲನದ ಜವಾಬ್ದಾರಿಯನ್ನು ಖುದ್ದು ಕೇಂಜ ಚೇತನ್ ಕುಮಾರ್ ಅವರೇ ನಿಭಾಯಿಸಿದ್ದಾರೆ.
ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಶ್ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ಮುಂತಾದವರ ತಾರಾಗಣವನ್ನು ಈ ಸಿನಿಮಾ ಒಳಗೊಂಡಿದೆ. ಸತೀಶ್ ಎಸ್.ಬಿ, ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣದೊಂದಿಗೆ `ಚೌ ಚೌ ಬಾತ್’ ಚಿತ್ರ ಮೂಡಿ ಬಂದಿದೆ.