ಬೆಂಗಳೂರು : ಕರ್ನಾಟಕದಲ್ಲಿ ತಯಾರಿಸುವ ಉತ್ಪನ್ನಗಳ ಮೇಲೆ ‘ಕನ್ನಡ’ ದಲ್ಲಿಯೂ ಹೆಸರು ಬರೆಯುವುದನ್ನು ಕಡ್ಡಾಯ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 69 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಿಸುವ ಉತ್ಪನ್ನಗಳ ಮೇಲೆ ಇಂಗ್ಲೀಷ್ ನಲ್ಲಿ ಬರೆಯಲಾಗುತ್ತಿದೆ. ಇನ್ನುಂದೆ ಕನ್ನಡದಲ್ಲಿಯೂ ಹೆಸರು ಬರೆಯುವುದನ್ನು ಕಡ್ಡಾಯ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಮಾತೃಭಾಷೆ ಕನ್ನಡವನ್ನು ವ್ಯವಹಾರಿಕವಾಗಿ ಬಳಸುವ ಜೊತೆಗೆ, ಇತರರೊಂದಿಗೆ ಕನ್ನಡದಲ್ಲಿಯೇ ಮಾತನಾಡುವಂತೆ ಶಪಥ ಮಾಡಬೇಕು. ಕನ್ನಡೇತರರಿಗೆ ಕನ್ನಡವನ್ನು ಕಲಿಸಲು ಪ್ರಯತ್ನಿಸಬೇಕು. ಕನ್ನಡ ರಾಜ್ಯದ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ, ಯಾವುದೇ ಜಾತಿ, ಧರ್ಮ, ಭಾಷೆಯವರೂ ಕೂಡ ಕನ್ನಡಿಗರೇ ಆಗುತ್ತಾರೆ. ಕನ್ನಡ ಭಾಷೆಗೆ ಎರಡು ಸಾವಿರ ಇತಿಹಾಸವಿದ್ದು, ಬಹಳ ಪ್ರಾಚೀನ ಭಾಷೆಯಾಗಿದೆ. ಆದ್ದರಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಭಾಷೆಯನ್ನು ಬಲಿಕೊಟ್ಟು ಉದಾರಿಗಳಾಗಬಾರದು. ಭಾಷೆಯ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೇ, ಅಭಿಮಾನಗಳಾಗಬೇಕು. ಭಾಷೆಯನ್ನು ಬೆಳೆಸಿ ಉಳಿಸಲು ಮೊದಲು ಕನ್ನಡಿಗರಾಗಬೇಕು. ಬೇರೆ ಭಾಷೆಯನ್ನು ಕಲಿಯಬೇಡಿ ಎಂದು ಹೇಳುವುದಿಲ್ಲ. ಬೇರೆ ಭಾಷಾ ಸಂಪತ್ತನ್ನು ಬೆಳೆಸಿಕೊಳ್ಳಿ, ಆದರೆ ಕನ್ನಡದಲ್ಲಿ ಮಾತನಾಡುವುದನ್ನು ಮರೆಯಬೇಡಿ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಉತ್ತಮವಾದುದು ಎಂದು ಮಹಾತ್ಮಾ ಗಾಂಧೀಯವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ, ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯವಾಗಿದೆ. 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ನೀಡಿದರೂ, ಕೇಂದ್ರದಿಂದ ದೊರೆಯುವ ತೆರಿಗೆ ಪಾಲು ಕೇವಲ 50-60 ಸಾವಿರ ಕೋಟಿ ಮಾತ್ರ. ಕನ್ನಡ ನಾಡು ಮುಂದುವರೆದಿದೆ ಎಂದು ಕೇಂದ್ರ ಸರ್ಕಾರ ನಮಗೆ ಅನ್ಯಾಯವೆಸಗಬಾರದು. ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ತೆರಿಗೆ ಪಾಲನ್ನು ನೀಡಿ ಎಂದು ಕೇಂದ್ರಕ್ಕೆ ನಮ್ಮ ಬೇಡಿಕೆಗೆ ರಾಜಕೀಯ ಬಣ್ಣವನ್ನು ಬಳಿಯಲಾಗುತ್ತಿದೆ. ನಮ್ಮ ಹಕ್ಕಿಗೆ ಹೋರಾಡಬೇಕಾಗಿದೆ. ರಾಜ್ಯದ ಸಂಸದರು ಕೇಂದ್ರಕ್ಕೆ ಹೋಗಿದ್ದು, ಕೇಂದ್ರದಲ್ಲಿ ಕನ್ನಡಪರ ಧ್ವನಿ ಎತ್ತಬೇಕು. ಈ ಶಕ್ತಿಯನ್ನು ಆಯ್ಕೆಯಾಗಿ ಹೋದವರು ಬೆಳೆಸಿಕೊಂಡರೆ ರಾಜ್ಯಕ್ಕೆ ನ್ಯಾಯ ದೊರೆಯುತ್ತದೆ. ಕೇಂದ್ರದ ಅನ್ಯಾಯದ ನಡುವೆಯೂ, ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಸುಮಾರು 200ಕ್ಕೂ ಹೆಚ್ಚು ಭಾಷೆಗಳಿವೆ. ಇಲ್ಲಿಯ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ ಪ್ರತಿಯೊಬ್ಬರೂ ಕನ್ನಡಿಗರಾಗುತ್ತಾರೆ. ಯಾವುದೇ ಭಾಷೆ, ಧರ್ಮ, ಜಾತಿಗೆ ಸೇರಿದವರೇ ಆಗಿರಲಿ ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರು. ಹೀಗಾಗಿ ಕನ್ನಡಿದಲ್ಲಿಯೇ ವ್ಯವಹರಿಸೋಣ, ಇತರರಿಗೂ ಕನ್ನಡ ಕಲಿಸೋಣ. ಬೇರೆ ಭಾಷೆಗಳನ್ನು ಗೌರವಿಸೋಣ ಆದರೆ ನೆಲದ ಭಾಷೆ ಕನ್ನಡವನ್ನು ಪ್ರೀತಿಸೋಣ. ಕರ್ನಾಟಕ ಮುಂದುವರೆದ ರಾಜ್ಯವೆಂದು ನ್ಯಾಯಯುತ ಅನುದಾನ ನೀಡದೆ ನಮಗೆ ಅನ್ಯಾಯ ಮಾಡಲಾಗುತ್ತಿದೆ. ಹಸು ಹಾಲು ಕೊಡುತ್ತದೆ ಎಂದು ಅಷ್ಟೂ ಹಾಲನ್ನು ಕರೆದರೆ ಕರು ಬಡವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹೀಗಾಗಿ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ಸಮಸ್ತ ಕನ್ನಡಿಗರು ಧ್ವನಿಯೆತ್ತಬೇಕಿದೆ ಎಂದರು.