ಶಿವಮೊಗ್ಗ: ಜಿಲ್ಲೆಯ ಸಾಗರ-ಸೊರಬ ರಸ್ತೆಯ ಹೊಳೆಕೊಪ್ಪ ಸಮೀಪದಲ್ಲಿ ಒಣ ಮರ ಕಡಿತಲೆ ಮಾಡಿಲ್ಲ. ವಾಹನ ಸವಾರರ ಬಲಿಗಾಗಿ ಕಾದಿವೆ ಅಂತ ನಿಮ್ಮ ಕನ್ನಡ ನ್ಯೂಸ್ ನೌ ಸುದ್ದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ ಕನ್ನಡ ನ್ಯೂಸ್ ನೌ ಫಲಶೃತಿ ಎನ್ನುವಂತೆ ಒಣಗಿದ ಮರಗಳನ್ನು ಸೊರಬ ಅರಣ್ಯಾಧಿಕಾರಿಗಳು ಕಡಿತಲೆ ಮಾಡಿದ್ದಾರೆ.
ಕಳೆದ ಐದು ದಿನಗಳ ಹಿಂದೆ ನಿಮ್ಮ ಕನ್ನಡ ನ್ಯೂಸ್ ನೌ ‘ವಾಹನ ಸವಾರ’ರ ಬಲಿಗಾಗಿ ಕಾದಿವೆ ‘ಒಣ ಮರ’: ಕಡಿತಲೆಗೆ ‘ಸೊರಬ ಅರಣ್ಯಾಧಿಕಾರಿ’ಗಳ ನಿರ್ಲಕ್ಷ್ಯ ಎಂಬುದಾಗಿ ಸುದ್ದಿ ಪ್ರಕಟಿಸಿತ್ತು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಭದ್ರಾಪುರದ ನಂತ್ರ ರಾಮಕೃಷ್ಣ ಎಂಬುವರ ಮನೆಯಿಂದ ಹಿಡಿದು ಅಮಚಿ ಸಮೀಪದ ಸೇತುವೆಯವರೆಗೆ ಸುಮಾರು 22 ಅಕೇಶಿಯಾ ಮರಗಳ ಸಾಲು ಜೊತೆಗೆ ಒಂದೆರೆಡು ಹುನಾಲು ಮರಗಳಿದ್ದಾವೆ. ದಾರಿಯುದ್ಧಕ್ಕೂ ಸಾಲು ಗಟ್ಟಿರುವಂತ 24 ಮರಗಳಲ್ಲಿ ಬರೋಬ್ಬರಿ 10ಕ್ಕೂ ಹೆಚ್ಚು ಮರಗಳು ಒಣಗಿ ಹೋಗಿದ್ದಾವೆ. ದಾರಿ ಹೋಕರ ಮೇಲೆ ಈಗಲೋ ಆಗಲೋ ಬೀಳೋ ಸ್ಥಿತಿಯಲ್ಲಿದ್ದಾವೆ ಎಂಬುದಾಗಿ ವರದಿ ಮಾಡಲಾಗಿತ್ತು.
ಈ ವರದಿಯ ಫಲಶೃತಿ ಎನ್ನುವಂತೆ ಸೊರಬ ವಲಯ ಅರಣ್ಯಾಧಿಕಾರಿ ಜಾವದ್ ಬಾಷಾ ಅಂಗಡಿ ಸೂಚನೆ ಮೇರೆಗೆ ನಿಸರಾಣಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮುತ್ತಣ್ಣ ಅವರು ತುರ್ತಾಗಿ ಬೀಳುವ ಸ್ಥಿತಿಯಲ್ಲಿ ಇದ್ದಂತ ಒಂದಷ್ಟು ಒಣ ಮರಗಳನ್ನು ಕಡಿತಲೆ ಮಾಡಿದ್ದಾರೆ. ಆ ಮೂಲಕ ಮುಂದಾಗಲಿದ್ದ ಅನಾಹುತವನ್ನು ತಪ್ಪಿಸೋ ಕೆಲಸ ಮಾಡಿದ್ದಾರೆ.
ಇನ್ನೂ ಅಕೇಶಿಯ ಮರಗಳ ಕಡಿತಲೆಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದೂ ಅವುಗಳನ್ನು ಕಡಿತಲೆ ಮಾಡಿಸುವುದಾಗಿ ಸೊರಬ ವಲಯ ಅರಣ್ಯಾಧಿಕಾರಿ ಜಾವದ್ ಬಾಷ ಅಂಗಡಿ ನಿಮ್ಮ ಕನ್ನಡ ನ್ಯೂಸ್ ನೌಗೆ ಸ್ಪಷ್ಟ ಪಡಿಸಿದ್ದಾರೆ. ಆ ಕಾರ್ಯ ಮುಂಗಾರು ಮಳೆ ಆರಂಭಕ್ಕೂ ಮುನ್ನ ಮಾಡಲಿ ಅಂತ ಸಾರ್ವಜನಿಕರ ಆಗ್ರಹವಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು