ಮಂಡ್ಯ: ನನ್ನ ಶಾಸಕ ಸ್ಥಾನದ ಆಡಳಿತಾವಧಿಯಲ್ಲಿ ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಬಯಕೆಯಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಗುರುವಾರ ಹೇಳಿದರು.
ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಕದಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ತುಮಕೂರು – ಮದ್ದೂರು ರಾಜ್ಯ ಹೆದ್ದಾರಿಯಿಂದ ಕದಲೂರು ಮಾರ್ಗವಾಗಿ ನಿಡಘಟ್ಟ ಗ್ರಾಮದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆವರೆಗೆ ಅಂದಾಜು 20 ಕೋಟಿ ವೆಚ್ಚದಲ್ಲಿ ಹೈಟೆಕ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ನಾನು ವಾಗ್ದಾನ ನೀಡಿದಂತೆ ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಬೇಕೆಂಬ ಇರಾದೆ ನನ್ನದಾಗಿದೆ ಎಂದು ಹೇಳಿದ್ದೆ ಅದಕ್ಕೆಲ್ಲ ಈಗ ಕಾಲ ಕೂಡಿಬಂದಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.
ಮುಂದಿನ ಒಂದು ವರ್ಷದಲ್ಲಿ ನನ್ನ ಹುಟ್ಟೂರು ಕದಲೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೇ ಹಂತಹಂತವಾಗಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಶಾಸಕ ಉದಯ್ ತಿಳಿಸಿದರು.
ಇನ್ನು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಸಹಿಸಲಾಗದೆ ಬಿಜೆಪಿ – ಜೆಡಿಎಸ್ ನಾಯಕರು ಕುತಂತ್ರ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ನಮ್ಮ ಮುಖ್ಯಮಂತ್ರಿಗಳ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ, ಹೀಗಾಗಿ ಏನಾದರೂ ಮಾಡಿ ರಾಜಕೀಯ ಜೀವನದಲ್ಲಿ ಮಸಿ ಬಳಿಯುವ ಕೆಲಸಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನವರು ರಾಜಕೀಯವಾಗಿ ಷಡ್ಯಂತ್ರ ರೂಪಿಸುತ್ತಿದ್ದು, ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿರುವುದಕ್ಕೆ ಸಹಿಸಲು ವಿರೋಧ ಪಕ್ಷಗಳಿಂದ ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಅವರ ರಾಜೀನಾಮೆ ಪ್ರಶ್ನೆಯೇ ಬರುವುದಿಲ್ಲ. ತನಿಖೆಯಲ್ಲಿ ಸಾಬೀತಾದ ಮೇಲೆ ಆ ಚರ್ಚೆ ಹೊರತು, ಈಗ ಅದರ ಆವಶ್ಯಕತೆಯೇ ಇಲ್ಲ. ಸಿದ್ದರಾಮಯ್ಯ ಅವರನ್ನು 5 ವರ್ಷ ಯಾವುದೇ ಕಾರಣಕ್ಕೂ ಅಲ್ಲಾಡಿಸಲಿಕ್ಕೂ ಆಗುವುದಿಲ್ಲ ಎಂದರು.
ಇದೇ ವೇಳೆ ಲೋಕೋಪಯೋಗಿ ಇಲಾಖೆ ಎಇಇ ದೇವಾನಂದ್, ಕಾವೇರಿ ನೀರಾವರಿ ನಿಗಮದ ಎಇಇ ನಾಗರಾಜ್, ಜೆಇ ಗಳಾದ ರಮೇಶ್, ಹನುಮಂತು, ಗ್ರಾ.ಪಂ ಅಧ್ಯಕ್ಷ ತಿಮ್ಮೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಕೆ.ಆರ್.ಮಹೇಶ್, ಮುಖಂಡರಾದ ಕೆ.ಎಂ.ರವಿ, ಕದಲೂರು ಗ್ರಾಪಂ ಸದಸ್ಯರು, ಮುಖಂಡರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮೈಸೂರು ಯುವ ದಸರಾ ವೀಕ್ಷಣೆಗೂ ಟಿಕೆಟ್ ಕಡ್ಡಾಯ: ಆನ್ ಲೈನ್ ಮೂಲಕ ಈ ರೀತಿ ಖರೀದಿಸಿ
ಶಿವಮೊಗ್ಗ: ‘ಸಾಗರ ಗ್ರಾಮಾಂತರ ಠಾಣೆ’ ಪೊಲೀಸರ ಭರ್ಜರಿ ಬೇಟೆ, ಇಬ್ಬರು ‘ಅಡಿಕೆ ಕಳ್ಳರು’ ಅರೆಸ್ಟ್