ಬೆಂಗಳೂರು: ವಿಧಾನಸಭೆಯಿಂದ 11 ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸೋಮವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜೂನ್ 13ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.
ಬಿಜೆಪಿಯ 6, ಕಾಂಗ್ರೆಸ್ ನ 4 ಹಾಗೂ ಜೆಡಿಎಸ್ ನ 1 ಎಂಎಲ್ ಸಿಗಳ ಅವಧಿ ಜೂನ್ 17ಕ್ಕೆ ಕೊನೆಗೊಳ್ಳಲಿದೆ. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಬಿಜೆಪಿಯಿಂದ ಎನ್.ರವಿಕುಮಾರ್, ಜೆಡಿಎಸ್ನಿಂದ ಬಿ.ಎಂ.ಫಾರೂಕ್ ಕಣದಲ್ಲಿದ್ದಾರೆ.
ಚುನಾವಣಾ ಆಯೋಗವು ಮೇ 27 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದೆ. ಜೂನ್ 4 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂನ್ 6 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಚುನಾವಣಾ ಆಯೋಗದ ಅಧಿಸೂಚನೆ ತಿಳಿಸಿದೆ.
ಸದ್ಯದ ಬಲಾಬಲದ ಪ್ರಕಾರ ಕಾಂಗ್ರೆಸ್ 7, ಬಿಜೆಪಿ 3, ಜೆಡಿಎಸ್ 1 ಸ್ಥಾನ ಗೆಲ್ಲಬಹುದು.
ಜವರೇಗೌಡ, ಉದ್ಯಮಿಗಳಾದ ಬಿ.ಎಂ.ಫಾರೂಕ್ ಮತ್ತು ಕುಪೇಂದ್ರ ರೆಡ್ಡಿ ಅವರು ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಗೆಲ್ಲಬಹುದಾದ ಏಕೈಕ ಸ್ಥಾನಕ್ಕಾಗಿ ರೇಸ್ ನಲ್ಲಿದ್ದಾರೆ ಎಂದು ಜೆಡಿಎಸ್ ನ ಹಿರಿಯ ಮುಖಂಡರೊಬ್ಬರು ತಿಳಿಸಿದರು