ಕೊಲ್ಕತ್ತಾ: ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾದ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಹುನಿರೀಕ್ಷಿತ ತೀರ್ಪು ಶನಿವಾರ ಹೊರಬೀಳಲಿದೆ
ಕೋಲ್ಕತಾ ಪೊಲೀಸರ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಕಳೆದ ವರ್ಷ ಆಗಸ್ಟ್ 9 ರಂದು ಉತ್ತರ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯರ ವಿರುದ್ಧ ಘೋರ ಅಪರಾಧ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸೀಲ್ಡಾ ನ್ಯಾಯಾಲಯದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರ ಮುಂದೆ ವಿಚಾರಣೆ ಪ್ರಾರಂಭವಾದ 57 ದಿನಗಳ ನಂತರ ತೀರ್ಪು ಬರಲಿದೆ.
ಆಸ್ಪತ್ರೆಯ ಸೆಮಿನಾರ್ ಕೋಣೆಯಲ್ಲಿ ವೈದ್ಯರ ಶವ ಪತ್ತೆಯಾದ ಒಂದು ದಿನದ ನಂತರ ಕೋಲ್ಕತ್ತಾ ಪೊಲೀಸರು ಆಗಸ್ಟ್ 10 ರಂದು ರಾಯ್ ನನ್ನು ಬಂಧಿಸಿದ್ದರು. ನಂತರ, ಕಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿತು. ರಾಯ್ ಗೆ ಮರಣದಂಡನೆ ವಿಧಿಸಬೇಕೆಂದು ಸಿಬಿಐ ಕೋರಿದೆ.
ನವೆಂಬರ್ 12ರಂದು ವಿಚಾರಣೆ ಆರಂಭವಾಗಿದ್ದು, 50 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಜನವರಿ 9ರಂದು ವಿಚಾರಣೆ ಮುಕ್ತಾಯವಾಗಿತ್ತು. ಸಂತ್ರಸ್ತೆಯ ಪೋಷಕರು, ಅಪರಾಧದಲ್ಲಿ ಇತರ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಹೆಚ್ಚಿನ ತನಿಖೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಎಲ್ಲಾ ಅಪರಾಧಿಗಳನ್ನು ಬಂಧಿಸಿ ನ್ಯಾಯದ ಮುಂದೆ ತರಲಾಗುವುದು ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.