ವರದಿ- ವಸಂತ ಬಿ ಈಶ್ವರಗೆರೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ (Karnataka Public Service Commission) ಕರ್ನಾಟಕ ಗೆಜೆಟ್ ಪ್ರೊಬೇಷನರ್ಸ್ 384 ಹುದ್ದೆಗಳ ಭರ್ತಿಗೆ ನೇಮಕಾತಿ (JOBS) ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಮೂಲಕ ಕೆಎಎಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಕೆಎಎಸ್ (KAS) ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಇಂದು ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದ್ದು 2023-24ನೇ ಸಾಲಿಗೆ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿಯಲ್ಲಿ ಗೆಜೆಟ್ ಪ್ರೊಬೇಷನರ್ ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿರೋದಾಗಿ ತಿಳಿಸಿದೆ.
ಹುದ್ದೆಗಳ ವಿವರ: ಗ್ರೂಪ್-ಎ ಹುದ್ದೆಗಳು 159, ಗ್ರೂಪ್-ಬಿ ಹುದ್ದೆಗಳು 225.
ಪ್ರಮುಖ ದಿನಾಂಕಗಳು : 384 ಕೆಎಎಸ್ ಹುದ್ದೆಗಳ ಭರ್ತಿಗೆ ದಿನ04-03-2024ರಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-04-2024 ಆಗಿರುತ್ತದೆ. ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ದಿನಾಂಕ 05-05-2024 ಆಗಿರುತ್ತದೆ.
ಪರೀಕ್ಷೆಯ ಪ್ರಯತ್ನಗಳು : ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ 5 ಬಾರಿ, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 7 ಬಾರಿ. ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಪ್ರಯತ್ನಗಳ ಯಾವುದೇ ಮಿತಿ ಇರುವುದಿಲ್ಲ. ಅರ್ಹತೆ- ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ವಯೋಮಿತಿ : ಸಾಮಾನ್ಯ ವರ್ಗದವರಿಗೆ 21 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 41 ವರ್ಷ. ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 43 ವರ್ಷ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆ ವಿಧಾನ : ಈ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ಜಾಲತಾಣ http://kpsc.kar.nic.in ಮೂಲಕ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಿಶೇಷ ಸೂಚನೆ: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿಳಾಸ, ಪ್ರವರ್ಗ, ತಂದೆ-ತಾಯಿ ಹೆಸರು, ವಿದ್ಯಾರ್ಹತೆ ಮುಂತಾದ ವಿಷಯಗಳನ್ನು ತಪ್ಪಾಗಿ ತಿಳಿಸಿ ಸದರಿ ಮಾಹಿತಿಗಳನ್ನು ಬದಲಾವಣೆ ಮಾಡುವಂತೆ ಮನವಿ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಆಯೋಗಕ್ಕೆ ಒಂದು ಬಾರಿ ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಿದ ನಂತರ ಸದರಿ ಅರ್ಜಿಯಲ್ಲಿನ ಮಾಹಿತಿಗಳನ್ನು ಆಯೋಗದ ಅಧಿಕಾರಿ/ಸಿಬ್ಬಂದಿಗಳಿಗೆ ತಂತ್ರಾಂಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿರದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳೇ ನೇರವಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಮಾಹಿತಿಗಳನ್ನು ಸರಿಪಡಿಸಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಂಬಂಧ ತದನಂತರ ಸಲ್ಲಿಸಲಾಗುವ ಯಾವುದೇ ಕೋರಿಕೆ/ಮನವಿಗಳನ್ನು ಆಯೋಗದಿಂದ ಪುರಸ್ಕರಿಸಲಾಗುವುದಿಲ್ಲ.
2.2 ವಿಶೇಷ ಸೂಚನೆ:
(1) ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ಆ ನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದ್ದು.
(2) ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ / ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು.
(3) ಅಭ್ಯರ್ಥಿಗಳು ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರ/ಇತರೆ ಪಮಾಣ ಪತ್ರಗಳನ್ನು ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಅಧಿಸೂಚನೆಯ ಅನುಬಂಧ-2ರಲ್ಲಿ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ತಮ್ಮ ಹೆಸರಿನಲ್ಲಿಯೇ ಪಡೆದಿಟ್ಟುಕೊಂಡು ಸದರಿ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡತಕ್ಕದ್ದು, (ದಾಖಲೆಗಳು ಸ್ಪಷ್ಟವಾಗಿರಬೇಕು) ತಪ್ಪಿದ್ದಲ್ಲಿ ಮೀಸಲಾತಿ/ಅಭ್ಯರ್ಥಿತ್ವವನ್ನು ತಿರಸ್ಕರಿಸಲಾಗುವುದು.