ಬೆಂಗಳೂರು : ಎಸ್ ಎಸ್ ಎಲ್ ಸಿ ಪಾಸಾದ ಮಹಿಳೆಯರಿಗೆ ಸಿಹಿಸುದ್ದಿ, ತುಮಕೂರು ಜಿಲ್ಲೆಯಲ್ಲಿನ ಖಾಲಿ ಇರುವ 117 ಅಂಗನವಾಡಿ ಕಾರ್ಯಕರ್ತೆ ಹಾಗೂ 829 ಅಂಗನವಾಡಿ ಸಹಾಯಕಿಯರ ಗೌರವಧನ ಸೇವಾ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಯ ಪರಿಷ್ಕೃತ ಮಾರ್ಗಸೂಚಿಯಂತೆ ಮಾನ್ಯ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ ಇವರ ಅನುಮೋದನೆಯಂತೆ ತುಮಕೂರು ಜಿಲ್ಲೆಯ 11 ತಿರು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಯ ಗೌರವಧನ ಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ವೆಬ್‌ಸೈಟ್ ಕೆಳಗಿನ ಮಾರ್ಗಸೂಚಿ/ನಿಬಂಧನೆಗಳಲ್ಲಿ ತಿಳಿಸಿರುವಂತೆ ಅರ್ಹ ಮಹಿಳಾ ಅಭ್ಯರ್ಥಿಗಳು ಹಾಗೂ ಮಹಿಳಾ ಲಿಂಗತ್ವ ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗೆ ದಿನಾಂಕ:
10-12-2025 ರಿಂದ 09-01-2026 (ಸಂಜೆ 5.30 ರವರೆಗೆ)
ಅರ್ಜಿ ಸಲ್ಲಿಸಲು: https://karnemakaone.kar.nic.in/abcd/ ಭೇಟಿ ನೀಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ಸೂಚನೆಗಳು:-
1. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಆನ್‌ಲೈನ್(Online)ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.
2. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನೇಮಕಾತಿಯ ಮಾರ್ಗಸೂಚಿ/ನಿಬಂಧನೆಗಳನ್ನು ಸ್ಪಷ್ಟವಾಗಿ ಓದಿಕೊಂಡು ನೀಡಲಾಗಿರುವ ಸೂಚನೆಯಂತೆ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯಕ ದೃಢಿಕೃತ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸುವುದು ಹಾಗೂ ಡಿಜಿ ಲಾಕರ್ (Dig locker ) ಬಳಸಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
3. ಆನ್‌ಲೈನ್ (Online) ಮೂಲಕವೇ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವುದು. ತದನಂತರ ಸಲ್ಲಿಸುವ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ.
ಆನ್‌ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು:
1. ಅರ್ಜಿ ನಿಗದಿತ ನಮೂನೆಯಲ್ಲಿ (ಆನ್‌ಲೈನ್)
2. ಧೃಢೀಕೃತ ಜನನ ಪ್ರಮಾಣ ಪತ್ರ/ಜನ್ಮದಿನಾಂಕ ಇರುವ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ಜನ್ಮ ದಿನಾಂಕ ಇರುವ ಶಾಲಾ ಪ್ರಮಾಣ ಪತ್ರ,
3. ನಿಗದಿತ ವಿದ್ಯಾರ್ಹತೆಯ ದೃಢೀಕೃತ ಅಂಕಪಟ್ಟಿ,
4. ಅಭ್ಯರ್ಥಿಯು ಅದೇ ಗ್ರಾಮದಲ್ಲಿ (ನಗರ ಪ್ರದೇಶವಾಗಿದ್ದಲ್ಲಿ ಅದೇ ವಾರ್ಡ್‌ನಲ್ಲಿ) ವಾಸ್ತವ್ಯವಿರುವ ಬಗ್ಗೆ ತಹಶೀಲ್ದಾರರು/ಉಪ ತಹಶೀಲ್ದಾರರಿಂದ ಪಡೆದ ಮೂರು (03) ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ.
5. ಸ್ಥಳೀಯರು ಎಂಬುದನ್ನು ದೃಢೀಕರಿಸಲು ಪೂರಕ ದಾಖಲೆಗಳಾಗಿ ಆಧಾರ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಪಡೆಯುವುದು. ಮದರೆ ತಾಂಡಾ ಹಾಗೂ ಹಾಡಿಗೆ ಸೇರಿದವರಾಗಿದ್ದರೆ ಸಂಬಂಧಿಸಿದ ವಾಸ್ತವ್ಯ ಪ್ರಮಾಣ ಪತ್ರ ಪಡೆದು ಸಲ್ಲಿಸುವುದು
6. ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ)
7. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವವರು ಅಂಗವಿಕಲರಾಗಿದ್ದಲ್ಲಿ ದೈಹಿಕ ಅಂಗವಿಕಲತೆ ಶೇ.40% ಮೀರದಂತೆ ಇರುವವರು ಅರ್ಜಿ ಸಲ್ಲಿಸಬಹುದು. ಅಂಗವಿಕಲತೆ ಪ್ರಮಾಣ ಪತ್ರ ಲಗತ್ತಿಸುವುದು. ನೇಮಕಾತಿ ಪ್ರಕ್ರಿಯೆಯಲ್ಲಿ ನಿಗಧಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳಿಗೆ ಅಂಗವಿಕಲರಿಗೆ+5 ಬೋನಸ್ ಅಂಕಗಳನ್ನು ನೀಡಲಾಗುತ್ತದೆ ಅಂಗವಿಕಲ ಅಭ್ಯರ್ಥಿಗಳು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಟ 19 ವರ್ಷದಿಂದ ಗರಿಷ್ಠ 45 ವರ್ಷದ ವಯೋಮಿತಿಯೊಳಗೆ ಇರತಕ್ಕದ್ದು.
8. ಅಭ್ಯರ್ಥಿಯು ವಿಚ್ಚೇದಿತರಾಗಿದ್ದಲ್ಲಿ, ವಿಚ್ಚೇದನಾ ಪ್ರಮಾಣ ಪತ್ರ ಲಗತ್ತಿಸುವುದು. (ನ್ಯಾಯಾಲಯದಿಂದ ಪಡೆದಿರಬೇಕು) ನೇಮಕಾತಿ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳಿಗೆ ವಿಚ್ಛೇದಿತೆಯರಿಗೆ +5 ಬೋನಸ್ ಅಂಕಗಳನ್ನು ನೀಡಲಾಗುತ್ತದೆ.
9. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಸಲ್ಪಟ್ಟ ಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ಮಾಜಿ ದೇವದಾಸಿಯರ ಮಕ್ಕಳು ಅರ್ಜಿ ಸಲ್ಲಿಸಿದಲ್ಲಿ ಈ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸುವುದು ನೇಮಕಾತಿ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳಿಗೆ ಮಾಜಿ ದೇವದಾಸಿಯರ ಮಕ್ಕಳಿಗೆ +5 ಬೋನಸ್ ಅಂಕಗಳನ್ನು ನೀಡಲಾಗುತ್ತದೆ
10. ಅಭ್ಯರ್ಥಿಯು ಇಲಾಖೆಯ ಸುಧಾರಣಾ ಸಂಸ್ಥೆ/ ರಾಜ್ಯ ಮಹಿಳಾ ನಿಲಯಗಳ ನಿವಾಸಿಯಾಗಿದ್ದಲ್ಲಿ ಕನಿಷ್ಠ 3 ವರ್ಷ ಸಂಸ್ಥೆಯಲ್ಲಿರಬೇಕು ಹಾಗೂ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಪಡೆದ ನಿವಾಸಿ ಪ್ರಮಾಣ ಪತ್ರ ಲಗತ್ತಿಸುವುದು, ವಾಸಸ್ಥಳ ದೃಢೀಕರಣವನ್ನು ಸಲ್ಲಿಸಿರುವ ಆ ಜಿಲ್ಲೆಯಲ್ಲಿ ಎಲ್ಲಿಯಾದರೂ ಅರ್ಜಿ ಸಲ್ಲಿಸಬಹುದು.
11. ಅಭ್ಯರ್ಥಿಯು ಯೋಜನಾ ನಿರಾಶ್ರಿತರಾಗಿದ್ದಲ್ಲಿ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸುವುದು. ನೇಮಕಾತಿ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳಿಗೆ ಯೋಜನಾ ನಿರಾಶ್ರಿತರಿಗೆ +5 ಬೋನಸ್ ಅಂಕಗಳನ್ನು ನೀಡಲಾಗುತ್ತದೆ.
12. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಂತ್ರಾಂಶದಲ್ಲಿ ಅಳವಡಿಸಿರುವ ಅರ್ಜಿ ಸಲ್ಲಿಕೆಯ ಮಾರ್ಗಸೂಚಿಗಳನ್ನು ಡೌನ್ ಲೋಡ್ ಮಾಡಿಕೊಂಡು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸುವುದು.
13. ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗಳಿಗೆ ವಿಧವೆಯರು ಅರ್ಜಿ ಸಲ್ಲಿಸಿದಾಗ ಆಸಿಡ್ ದಾಳಿಗೆ ಒಳಗಾದವರು ಮತ್ತು ಇಲಾಖಾ ಸಂಸ್ಥೆಗಳ ನಿವಾಸಿಗಳನ್ನು ಹೊರತುಪಡಿಸಿ ಇತರ ಎಲ್ಲಾ ಸ್ವೀಕೃತ ಅರ್ಜಿಗಳನ್ನು ಪರಿಗಣಿಸದೇ ಮೂರನೇ ಆದ್ಯತೆ ಮೇರೆಗೆ ನೇರವಾಗಿ ವಿಧವೆಯರನ್ನೇ ಆಯ್ಕೆಗೆ ಪರಿಗಣಿಸಲಾಗುವುದು. ವಿಧವೆಯರು ಪತಿಯ ಮರಣ ಪ್ರಮಾಣ ಪತ್ರ ಅಥವಾ ವಿಧವಾ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಲಗತ್ತಿಸುವುದು. ಅರ್ಜಿ ಸಲ್ಲಿಸಿದ ನಂತರ ವಿಧವೆಯಾದಲ್ಲಿ ಪರಿಗಣಿಸಲಾಗುವುದಿಲ್ಲ.
14. ವಿಧವೆಯರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ (ವಿಧವೆಗೆ) ಪ್ರಥಮ ಆದ್ಯತೆ ನೀಡತಕ್ಕದ್ದು, ಈ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸುವುದು.
15. ವಿಧವೆಯರು ತಾವು ಪ್ರಸ್ತುತ ಎಲ್ಲಿ ವಾಸವಿರುವುದಾಗಿ, ವಾಸಸ್ಥಳ ದೃಢೀಕರಣವನ್ನು ಸಲ್ಲಿಸಿರುತ್ತಾರೆ. ಆ ಸ್ಥಳವನ್ನೇ ಅವರ ವಾಸಸ್ಥಳವೆಂದು ಪರಿಗಣಿಸಲಾಗುವುದು.
16. ಒಂದೇ ಹುದ್ದೆಗೆ ಇಬ್ಬರು ವಿಧವೆಯರು ಅರ್ಜಿ ಸಲ್ಲಿಸಿದಲ್ಲಿ ಗರಿಷ್ಠ ಅಂಕ ಪಡೆದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.









