ಬೆಂಗಳೂರು: ಜೆಡಿಎಸ್ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಬೆಳ್ಳಿನಾಣ್ಯ ವಾಟ್ಸಪ್ ಲೈನ್ ನಂಬರ್ ಅನ್ನು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಲೋಕಾರ್ಪಣೆ ಮಾಡಿದರು.
ರಾಷ್ಟ್ರೀಯ ಮಂಡಳಿ ಸಭೆ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ನಂತರ ಶನಿವಾರ ನಡೆದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಹೆಚ್.ಡಿ. ದೇವೇಗೌಡರ ಜತೆಗೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲಾ ನಾಯಕರು, ಜಿಲ್ಲಾಧ್ಯಕ್ಷರು, ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ ರಜತ ಮಹೋತ್ಸವದ ಮುಖ್ಯ ಆಕರ್ಷಣೆಯಾಗಿ ಪಕ್ಷದ ಚಿನ್ಹೆ ತೆನೆಹೊತ್ತ ರೈತ ಮಹಿಳೆ, ಹೆಚ್.ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಚಿತ್ರಗಳು ಇರುವ ಬೆಳ್ಳಿ ನಾಣ್ಯವನ್ನು ಲೋಕಾರ್ಪಣೆ ಮಾಡಲಾಯಿತು. ಬಳಿಕ ಮಾಜಿ ಪ್ರಧಾನಿಗಳು ವಾಟ್ಸಪ್ ಲೈನ್ ನಂಬರ್ 9964002028 ಬಿಡುಗಡೆ ಮಾಡಿದರು.
ಎರಡು ನಿರ್ಣಯಗಳ ಅಂಗೀಕಾರ:
ಜೆಡಿಎಸ್ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ರೈತರ ಪರವಾಗಿ ಹಾಗೂ ಪಕ್ಷ ಸಂಘಟನೆ ಮಾಡುವ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಖ್ಯವಾಗಿ ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿರುವ ಸಾವರ್ಜನಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಾಗಬೇಕು. ನೆರೆಯಿಂದ ಆಸ್ತಿ, ಬೆಳೆ ಕಳೆದುಕೊಂಡಿರುವವರಿಗೆ ಸೂಕ್ತ ಪರಿಹಾರ ಕೊಡಬೇಕು. ರೈತ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ಖರೀದಿ ಮಾಡಬೇಕು ಎಂಬ ನಿರ್ಣಯವನ್ನು ಅಂಗಿಕರಿಸಲಾಯಿತು.
ಜತೆಗೆ ರಾಷ್ಟ್ರ ಮತ್ತು ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಠವಾಗಿ ತಳಮಟ್ಟದಿಂದ ಕಟ್ಟುವ ಬಗ್ಗೆ ಕೂಡ ನಿರ್ಣಯ ಕೈಗೊಳ್ಳಲಾಯಿತು.
ಈ ಸಂಭ್ರಮಾಚರಣೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ರವರು, ಕೋರ್ ಕಮೀಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸಂಸದ ಮಲ್ಲೇಶ್ ಬಾಬು, ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಹ್ವಾನಿತರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಆಹ್ವಾನಿತ ನಾಯಕರು ಪಾಲ್ಗೊಂಡಿದ್ದರು.
BREAKING: ಜಾತಿ ನಿಂದನೆ ಪ್ರಕರಣದಲ್ಲಿ ರಮೇಶ್ ಕತ್ತಿಗೆ ನಿರೀಕ್ಷಣಾ ಜಾಮೀನು ಮಂಜೂರು
‘ಖಾಸಗಿ ಆಸ್ಪತ್ರೆ’ಗಳು ಈ ಚಿಕಿತ್ಸೆಗೆ ಮುಂಗಡ ಹಣಕ್ಕೆ ಒತ್ತಾಯಿಸಿದ್ರೆ ‘ಲೈಸೆನ್ಸ್’ ರದ್ದು; ರಾಜ್ಯ ಸರ್ಕಾರ ಎಚ್ಚರಿಕೆ








