ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ಉಂಟಾಗಿರುವ ಯುದ್ಧದ ಭೀತಿಯನ್ನು ಶಮನಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇರಾನ್ನ ಇಚ್ಛೆಯಂತೆ ಈ ಸಂಕೀರ್ಣ ಸಂಧಾನ ಪ್ರಕ್ರಿಯೆಯನ್ನು ಮುನ್ನಡೆಸಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance) ಅವರನ್ನು ಸಂಧಾನಕಾರರನ್ನಾಗಿ ನಿಯೋಜಿಸಲಾಗಿದೆ.
ಇರಾನ್ ಮತ್ತು ಅಮೆರಿಕದ ನಡುವಿನ ಈ ಹೈ-ವೋಲ್ಟೇಜ್ ಮಾತುಕತೆಗಳು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆಯಲಿವೆ. ಇದಕ್ಕಾಗಿ ಜೆಡಿ ವ್ಯಾನ್ಸ್ ಅವರು ಈಗಾಗಲೇ ಅಮೆರಿಕದ ನಿಯೋಗದೊಂದಿಗೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಶಾಂತಿ ಮಾತುಕತೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವ್ಯಾನ್ಸ್, “ಇರಾನ್ ಪ್ರಾಮಾಣಿಕವಾಗಿ ಮಾತುಕತೆಗೆ ಬಂದರೆ ನಾವು ಸಹಕಾರ ನೀಡುತ್ತೇವೆ. ಆದರೆ ನಮ್ಮನ್ನು ಆಟವಾಡಿಸಲು (Play us) ಪ್ರಯತ್ನಿಸಿದರೆ ನಾವು ಸುಮ್ಮನಿರುವುದಿಲ್ಲ,” ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.
ವ್ಯಾನ್ಸ್ ಅವರು ಮೊದಲಿನಿಂದಲೂ ಮಧ್ಯಪ್ರಾಚ್ಯದ ಸುದೀರ್ಘ ಯುದ್ಧಗಳ ಬಗ್ಗೆ ಅಸಮಾಧಾನ ಹೊಂದಿದ್ದವರು. ಈ ಕಾರಣಕ್ಕಾಗಿಯೇ ಇರಾನ್ ಸಹ ವ್ಯಾನ್ಸ್ ಅವರ ಉಪಸ್ಥಿತಿಯನ್ನು ಮಾತುಕತೆಯಲ್ಲಿ ಬಯಸಿದೆ ಎಂದು ವರದಿಗಳು ತಿಳಿಸಿವೆ.
ಜೆಡಿ ವ್ಯಾನ್ಸ್ ಅವರೊಂದಿಗೆ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಮತ್ತು ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕೋಫ್ ಕೂಡ ಈ ಸಂಧಾನದ ತಂಡದಲ್ಲಿದ್ದಾರೆ.








