ಮಂಡ್ಯ : ಮದ್ದೂರು ನಗರದ ಪೇಟೆ ಬೀದಿಯ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
ಪೇಟೆ ಬೀದಿ ರಸ್ತೆಯ ಕೊಲ್ಲಿ ವೃತ್ತದಿಂದ ಪ್ರವಾಸಿ ಮಂದಿರದ ವೃತ್ತದವರೆಗೆ ತೆರವು ಕಾರ್ಯಾಚರಣೆಯಲ್ಲಿ ನಗರಸಭೆ, ಲೋಕೋಪಯೋಗಿ ಹಾಗೂ ಮದ್ದೂರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ಅವರ ನೇತೃತ್ವದಲ್ಲಿ ಬಿಗಿ ಭದ್ರತೆಯಲ್ಲಿ ಅಂಗಡಿ ಮುಂಗಟ್ಟುಗಳ ಸರಕು, ತಗಡಿನಶೀಟ್ ಮತ್ತು ಇತರೆ ವಸ್ತುಗಳನ್ನು ಫುಟ್‌ಪಾತ್ ಮೇಲೆ ಹಾಕಿದ್ದನ್ನು ತೆರವುಗೊಳಿಸಿದರು.
ಇದೇ ವೇಳೆ ನಗರಸಭಾ ಪೌರಾಯುಕ್ತರಾದ ರಾಧಿಕಾ ಅವರು ಮಾತನಾಡಿ, ಮದ್ದೂರು ನಗರದ ಪೇಟೆ ಬೀದಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದು. ಬಹುತೇಕ ಅಂಗಡಿಯವರು ತಮ್ಮ ಅಂಗಡಿಗಳ ಸರಕನ್ನು ಪುಟ್ ಪಾತ್ ಒತ್ತುವರಿ ಮಾಡಿಕೊಂಡು ಹಾಕುವುದರಿಂದ ವಾಹನ ಹಾಗೂ ಸಾರ್ವಜನಿಕರು ಸಂಚಾರ ಮಾಡುವುದು ಕಷ್ಟವಾಗುತ್ತದೆ ಎಂದು ನಗರಸಭೆಗೆ ಈ ಬಗ್ಗೆ ನಾಗರಿಕರು ಹಲವು ಬಾರಿ ಮನವಿ ಮಾಡಿದ್ದರು.
ಈ ಹಿನ್ನಲೆ ಎಲ್ಲಾ ಸಿಬ್ಬಂದಿಯೊಂದಿಗೆ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ ಅಂಗಡಿ ಸರಕುಗಳನ್ನು ಇಡದೆ ವಾಹನಗಳು ಹಾಗೂ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅಂಗಡಿ ಮಾಲೀಕರು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ
ಪುಟ್ ಪಾತ್ ಮೇಲೆ ಅನಧಿಕೃತವಾಗಿ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಶೆಡ್ ತೆರವುಗೊಳಿಸುವಂತೆ ನಗರಸಭೆ ವತಿಯಿಂದ ಹಲವು ಬಾರಿ ಸೂಚಿಸಲಾಗಿತ್ತು. ಆದ್ರೆ ವ್ಯಾಪಾರಿಗಳು ಮಾತ್ರ ಕ್ಯಾರೆ ಎನ್ನದೆ ವ್ಯಾಪಾರ ಮುಂದುವರೆಸಿದ್ದರು. ಗುರುವಾರ ಬೆಳ್ಳಂಬೆಳಿಗ್ಗೆ ನಗರಸಭಾ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ಆತಂಕಗೊಂಡ ವ್ಯಾಪಾರಿಗಳು ನಗರಸಭಾ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆಯಿತು.
ಬಳಿಕ ನಾವೇ ಅಂಗಡಿ ತೆರವು ಮಾಡುತ್ತೇವೆ. ಸಮಯಾವಕಾಶ ನೀಡುವಂತೆ ಮನವಿ ಕೂಡ ಮಾಡಿದರು.ಆದರೆ, ಯಾವುದೇ. ಮನವಿಗೂ ಮನ್ನಣೆ ನೀಡದ ಅಧಿಕಾರಿಗಳು ಅಂಗಡಿಗಳಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಿ ಜೆಸಿಬಿ ಮೂಲಕ
ಶೆಡ್, ತಗಡಿನ ಶೀಟ್ ಹಾಗೂ ಬೋರ್ಡ್ ಗಳನ್ನು ತೆರವುಗೊಳಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ








