ಬೆಂಗಳೂರು: ಜನವರಿ 18 ರಿಂದ 28 ರವರೆಗೆ ವಿಶ್ವ ಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ 215ನೇ ಫಲಪುಪ್ಪ ಪ್ರದಶನವನ್ನು ಲಾಲ್ಬಾಗ್ನ ಗಾಜಿನಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಶಮ್ಲಾ ಇಕ್ಫಾಲ್ ಅವರು ತಿಳಿಸಿದರು.
ಮಂಗಳವಾರ ತೋಟಗಾರಿಕೆ ಇಲಾಖೆಯ ಮಾಹಿತಿ ಕೇಂದ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಜನವರಿ 18 ರಂದು ಗುರುವಾರ ಸಂಜೆ 6.00 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿಗಳು, ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಖ್ಯಾತ ವಿದ್ವಾಂಸರಾದ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಅವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನಮ್ಮ ರಾಜ್ಯದ ಜೇನುತುಪ್ಪ ಬ್ರಾಂಡ್ನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.
ವಿಶೇಷ ಆಹ್ವಾನಿತರಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಕಾರ್ಯಕ್ರಮದಲ್ಲಿ ಭಾವಹಿಸಲಿದ್ದಾರೆ.
ಗಾಜಿನ ಮನೆಯ ಪ್ರವೇಶದಲ್ಲಿ ಇಂಡೋ-ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯ ಆಕರ್ಷಕ ಹೂ ಜೋಡಣೆ ಮತ್ತು ಬಸವಣ್ಣನವರ ಪುತ್ಥಳಿ, ಗಾಜಿನ ಮನೆಯ ಕೇಂದ್ರಭಾಗದಲ್ಲಿ ನೂತನ ಅನುಭವ ಮಂಟಪದ ಪುಷ್ಪ ಮಾದರಿ ಹಾಗೂ ಅದರ ಮುಂದೆ ರಾರಾಜಿಸಲಿರುವ ವಿಶ್ವಗುರು ಬಸವಣ್ಣನವರ 10 ಅಡಿ ಎತ್ತರದ ಬೃಹತ್ ಪ್ರತಿಮೆ, ಗಾಜಿನ ಮನೆಯ ಕೇಂದ್ರಭಾಗದ ಬಲಬದಿಗೆ ವಚನಾನುಭವ ಗೋಷ್ಠಿ ಮತ್ತು ವೈವಿಧ್ಯಮಯ ಹೂಗಳ ಬೃಹತ್ ಹ್ಯಾಂಗಿಂಗ್ ಟ್ರೀ ಪರಿಕಲ್ಪನೆಯ ಅನಾವರಣ, ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯಮಂಟಪದ ಪುಷ್ಪ ಮಾದರಿ ಮತ್ತು ಬಸವಣ್ಣನವರ ಬದುಕಿನ ಪ್ರಮುಖ ಘಟ್ಟಗಳನ್ನು ಸೂಚಿಸುವ ಕಲಾಕೃತಿಗಳು ಹಾಗೂ ಇನ್ನಿತರ ಪ್ರದರ್ಶನಗಳು ಇರುತ್ತವೆ ಎಂದು ತಿಳಿಸಿದರು.
ಜನವರಿ 20, ಶನಿವಾರ ಮಧ್ಯಾಹ್ನ 1.00 ಗಂಟೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್ ಅವರು ಇಕೆಬಾನ, ಪುಷ್ಫ ಭಾರತಿ, ಪುಪ್ಪ ರಂಗೋಲಿ, ಜಾನೂರ್, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು, ಬೊನ್ಸಾಯ್ ಗಿಡಗಳ ಪ್ರದರ್ಶನದ ಉದ್ಘಾಟನೆಯನ್ನು ಮಾಡಲಿದ್ದಾರೆ.
ಗಾಜಿನ ಮನೆಯ ಪ್ರದರ್ಶಿಕೆಗಳು, ತೋಟಗಳ ಸ್ಪರ್ಧೆಗಳು, ಇಕೆಬಾನ, ಪುಷ್ಫ ಭಾರತಿ, ಪುಪ್ಪ ರಂಗೋಲಿ, ಜಾನೂರು, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು, ಬೊನ್ಸಾಯ್ ಗಿಡಗಳ ಪ್ರದರ್ಶನ ಮತ್ತು ಪ್ರಬಂಧ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ವಿಜೇತರಿಗೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಅವರು ಜನವರಿ 27 ರಂದು ಶನಿವಾರ ಮಧ್ಯಾಹ್ನ 2.30 ಬಹುಮಾನ ವಿತರಿಸಲಿದ್ದಾರೆ.
ಸಮವಸ್ತ್ರ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಶುಲ್ಕ ರಹಿತವಾಗಿರುತ್ತದೆ. ರಜೆ ದಿನ ಪ್ರವೇಶ ಶುಲ್ಕ ರೂ.100 ಹಾಗೂ ಉಳಿದ ದಿನದಲ್ಲಿ ರೂ.80 ಪ್ರವೇಶ ಶುಲ್ಕ ನಿಗದಿಪಡಿಸಿದೆ. ಮಕ್ಕಳಿಗೆ 30ರೂ ಶುಲ್ಕ ನಿಗದಿಪಡಿಸಿದ್ದು, ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಮೆಟ್ರೊ ರೈಲಿನಲ್ಲಿ ಬರುವುದು ಸೂಕ್ತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ರಮೇಶ್ ಡಿ.ಎಸ್., ಜಂಟಿ ನಿರ್ದೇಶಕರಾದ ಡಾ. ಎಂ. ಜಗದೀಶ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.