ಬೆಂಗಳೂರು: ಕೈದಿಯೊಬ್ಬ ತೆಗೆದ ಫೋಟೋ ವೈರಲ್ ಆದ ಬಗ್ಗೆ ಜೈಲಿನ ಅಧಿಕಾರಿಯೊಬ್ಬರು ದಾಖಲಿಸಿರುವ ಎಫ್ಐಆರ್ ಬಗ್ಗೆ ಬೆಂಗಳೂರು ಆಗ್ನೇಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗ್ಯಾಂಗ್ ಸ್ಟರ್ ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ಮತ್ತು ಕುಲ್ಲಾ ಸೀನ ಅವರೊಂದಿಗೆ ದರ್ಶನ್ ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಪಾನೀಯ ಕುಡಿಯುತ್ತಿರುವ ಚಿತ್ರ ಇದಾಗಿದೆ.
ನಾಗರಾಜ್ ಮತ್ತು ವೇಲು ಎಂಬುವರನ್ನು ಮೂರು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಚಿತ್ರದಲ್ಲಿ ನಾಗಾ ಕಾಣಿಸಿಕೊಂಡಿದ್ದರೂ, ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ವೇಲು ಚಿತ್ರವನ್ನು ಕ್ಲಿಕ್ ಮಾಡಿದ ವ್ಯಕ್ತಿಯಾಗಿರಬಹುದು ಎಂದು ತಿಳಿದುಬಂದಿದೆ.
‘ಮೊಬೈಲ್ ಫೋನ್ ನ ಮೂಲ, ಅದು ಯಾವ ಮಾದರಿ, ಚಿತ್ರ ಹೇಗೆ ಸೋರಿಕೆಯಾಯಿತು ಮತ್ತು ಮೊಬೈಲ್ ಫೋನ್ ಅನ್ನು ಅವರು ಹೇಗೆ ನಾಶಪಡಿಸಿದರು ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ’ ಎಂದು ಅಧಿಕಾರಿ ತಿಳಿಸಿದರು.
ಚಿತ್ರದಲ್ಲಿ ದರ್ಶನ್ ಮತ್ತು ಇತರ ಮೂವರು ಕಾಫಿ ಕುಡಿಯುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಚಿತ್ರ ಸೋರಿಕೆಯಾಗಿದೆ ಎಂದು ತಿಳಿದ ನಂತರ, ಅವರು ಕಪ್ ಗಳನ್ನು ಸಹ ನಾಶಪಡಿಸಿದ್ದರು. ಆದಾಗ್ಯೂ, ಅವರು ಮೊಬೈಲ್ ಅನ್ನು ಸುರಕ್ಷಿತ ಸ್ಥಳದಲ್ಲಿ ಬಚ್ಚಿಟ್ಟಿದ್ದರು.