ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ, ಭಾರತ ಸರ್ಕಾರವು ದೇಶದ ಇಂಧನ ಭದ್ರತೆಗಾಗಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ‘ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ-1968’ (ESMA) ಅನ್ನು ಇಡೀ ದೇಶದಲ್ಲಿ ಜಾರಿಗೊಳಿಸಿದೆ.
ಇದರೊಂದಿಗೆ, ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಗರಿಷ್ಠ ಮಟ್ಟದ ಎಲ್‌ಪಿಜಿ ಉತ್ಪಾದನೆಗೆ ಬಳಸಿಕೊಳ್ಳುವಂತೆ ಮತ್ತು ಹೈಡ್ರೋಕಾರ್ಬನ್ ಘಟಕಗಳನ್ನು ಎಲ್‌ಪಿಜಿ ಉತ್ಪಾದನೆಯತ್ತ ತಿರುಗಿಸುವಂತೆ (Divert) ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಜೊತೆಗೆ ಅಗತ್ಯ ವಸ್ತುಗಳ ಕಾಯ್ದೆ-1955 ಅನ್ನು ಸಹ ಜಾರಿಗೊಳಿಸಲಾಗಿದೆ.
ಏನಿದು ಎಸ್‌ಮಾ (ESMA) ಕಾನೂನು?
1968ರಲ್ಲಿ ಸಂಸತ್ತು ಅಂಗೀಕರಿಸಿದ ಈ ಕಾಯ್ದೆಯು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಗತ್ಯವಾದ ಸೇವೆಗಳನ್ನು ಸುಗಮವಾಗಿ ನಡೆಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗುವಂತಹ ಸಂದರ್ಭಗಳಲ್ಲಿ ಈ ಕಾನೂನನ್ನು ಅಸ್ತ್ರವಾಗಿ ಬಳಸಲಾಗುತ್ತದೆ.
ಎಸ್‌ಮಾ ಅಡಿಯಲ್ಲಿ ಬರುವ ಪ್ರಮುಖ ಸೇವೆಗಳು:
-
ಸಾರ್ವಜನಿಕ ಸಾರಿಗೆ (ಬಸ್, ರೈಲು ಇತ್ಯಾದಿ).
-
ಆರೋಗ್ಯ ಸೇವೆಗಳು (ಡಾಕ್ಟರ್, ನರ್ಸ್, ಆಸ್ಪತ್ರೆ).
-
ನೀರು ಸರಬರಾಜು, ನೈರ್ಮಲ್ಯ ಮತ್ತು ವಿದ್ಯುತ್ ಶಕ್ತಿ.
-
ಪೆಟ್ರೋಲಿಯಂ, ಕಲ್ಲಿದ್ದಲು, ಉಕ್ಕು ಮತ್ತು ರಸಗೊಬ್ಬರ ಉತ್ಪಾದನೆ ಹಾಗೂ ವಿತರಣೆ.
-
ಬ್ಯಾಂಕಿಂಗ್ ಮತ್ತು ಆಹಾರ ಧಾನ್ಯಗಳ ವಿತರಣಾ ವ್ಯವಸ್ಥೆ.
ನಿಯಮ ಮೀರಿದರೆ ಶಿಕ್ಷೆ ಏನು?
ಎಸ್‌ಮಾ ಜಾರಿಯಾದ ನಂತರ ಯಾವುದೇ ನೌಕರ ಅಥವಾ ಸಂಘಟನೆಗಳು ಮುಷ್ಕರ ನಡೆಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ:
-
ವಾರೆಂಟ್ ಇಲ್ಲದೆ ಬಂಧನ: ಯಾವುದೇ ಪೊಲೀಸ್ ಅಧಿಕಾರಿಗೆ ಮುಷ್ಕರ ನಿರತರನ್ನು ವಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರವಿರುತ್ತದೆ.
-
ಜೈಲು ಮತ್ತು ದಂಡ: ನಿಯಮ ಮೀರಿದವರಿಗೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
-
ಕೆಲಸದಿಂದ ವಜಾ: ಮುಷ್ಕರದಲ್ಲಿ ಪಾಲ್ಗೊಂಡ ಅಥವಾ ಪ್ರಚೋದಿಸಿದ ನೌಕರರನ್ನು ಕೆಲಸದಿಂದ ವಜಾ ಮಾಡುವ ಅಧಿಕಾರ ಸರ್ಕಾರಕ್ಕಿದೆ.
-
ಅವಧಿ: ಈ ಕಾನೂನನ್ನು ಒಮ್ಮೆ ಜಾರಿಗೊಳಿಸಿದರೆ ಗರಿಷ್ಠ 6 ತಿಂಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಅಗತ್ಯ ವಸ್ತುಗಳ ಕಾಯ್ದೆ, 1955 ಎಂದರೇನು?
ಈ ಕಾಯ್ದೆಯು ಅಗತ್ಯ ವಸ್ತುಗಳ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಶಕ್ತಿ ನೀಡುತ್ತದೆ. ಕಾಳಸಂತೆ ಅಥವಾ ಅಕ್ರಮ ದಾಸ್ತಾನು (Hoarding) ತಡೆಯುವುದು ಇದರ ಮುಖ್ಯ ಉದ್ದೇಶ. ಔಷಧಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಬೀಜಗಳು ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಯುದ್ಧ ಅಥವಾ ನೈಸರ್ಗಿಕ ವಿಕೋಪದಂತಹ ಅಸಾಮಾನ್ಯ ಸಂದರ್ಭಗಳಲ್ಲಿ ಸರ್ಕಾರವು ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆ.
BREAKING: ಇಂಡಿಗೋ ಸಿಇಒ ಹುದ್ದೆಗೆ ಪೀಟರ್ ಎಲ್ಬರ್ಸ್ ರಾಜೀನಾಮೆ | IndiGo CEO Pieter Elbers








