ಬೆಂಗಳೂರು: ಸುರಂಗ ಮಾರ್ಗ ರಚನೆ ಮೂಲಕ ಬೆಂಗಳೂರಿಗೆ ಆಪತ್ತು ಎದುರಾಗಲಿದೆ ಎಂಬ ವರದಿಗಳಿವೆ. ಇಷ್ಟಿದ್ದರೂ ಡಿ.ಕೆ.ಶಿವಕುಮಾರ್ ಅವರು ಇದನ್ನು ಮಾಡಲು ಮುಂದಾಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ಈ ಸುರಂಗ ಯೋಜನೆ ವಿರುದ್ಧ ಈಗಾಗಲೇ ಹಲವು ಸಂಸ್ಥೆಗಳು- ಪರಿಸರವಾದಿಗಳು ಧ್ವನಿ ಎತ್ತಿದ್ದಾರೆ. ಅದೇನು ಜನೋಪಯೋಗಿ ಎಂದು ನನಗೆ ಅನಿಸುತ್ತಿಲ್ಲ; ಟನೆಲ್ ರಸ್ತೆಗೆ 300- 400 ರೂ. ಟೋಲ್ ಕೊಡಬೇಕಾಗುತ್ತದೆ. ಹಣ ಕಟ್ಟಿಸಿಕೊಳ್ಳದೇ ಮಾಡುವ ಕೆಲಸ ಇದ್ದರೆ ಮಾಡಿ ಎಂದು ಆಗ್ರಹಿಸಿದರು. ಭೂಮಿ ಮೇಲೆ ರಸ್ತೆ ಮಾಡುವುದು ಸೂಕ್ತವಿದ್ದು, ಈ ಕುರಿತು ಗಮನಿಸಲಿ ಎಂದು ಒತ್ತಾಯಿಸಿದರು.
ಬೆಂಗಳೂರು ಬೆಳೆಸುವುದನ್ನು ನಿಲ್ಲಿಸಿ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಬೆಳೆಸಿ ಎಂದು ತಿಳಿಸಿದರು. ಅಲ್ಲಿ ಜನರು ನಿಲ್ಲುವಂತೆ ಮಾಡಿ. ಗುಲ್ಬರ್ಗದ ಸ್ಥಿತಿ ಏನಾಗಿದೆ? ತಲಾದಾಯದ ವಿಷಯದಲ್ಲಿ ಅದು ಅತ್ಯಂತ ಹಿಂದುಳಿದಿದೆ ಎಂದು ನುಡಿದರು. ಬಿಜಾಪುರದಲ್ಲಿ ಕೈಗಾರಿಕೆ ಸ್ಥಾಪಿಸಿ ಎಂದು ಎಂ.ಬಿ.ಪಾಟೀಲರಿಗೆ ಮನವಿ ಮಾಡಿದರು.
ವಿವೇಕದ ಪ್ರಶ್ನೆ ಇದ್ದಂತಿಲ್ಲ..
ಪ್ರಿಯಾಂಕ್ ಖರ್ಗೆ ಬಳಿ ವಿವೇಕದ ಪ್ರಶ್ನೆಗಳಿವೆ ಎಂದು ಅನಿಸುತ್ತಿಲ್ಲ; ಆದ್ದರಿಂದ ಅವರ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು. ಆರೆಸ್ಸೆಸ್‍ಗೆ ದೇಣಿಗೆ ಎಲ್ಲಿಂದ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಇದನ್ನು ಇಲಾಖೆ ಪ್ರಶ್ನಿಸಲಿ. ಇ.ಡಿ, ಆದಾಯ ತೆರಿಗೆ ಇಲಾಖೆಯವರು ಕೇಳಲಿ, ಎಲ್ಲೋ ಕುಳಿತು ಕೇಳುವವರಿಗೆ ಅವರು ಉತ್ತರ ಕೊಡುತ್ತ ಕೂರುತ್ತಾರಾ ಎಂದು ಕೇಳಿದರು. ಅವರು ಆರೆಸ್ಸೆಸ್ ಕಚೇರಿಗೆ ಹೋಗಿ ಪ್ರಶ್ನಿಸುವುದು ಒಳ್ಳೆಯದು ಎಂದರು.
ಆರೆಸ್ಸೆಸ್ ನೋಂದಣಿ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ನೋಂದಣಿ ಆಗಬೇಕೆಂದು ಕಾನೂನಿನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಇವರು ಗ್ರಾಮೀಣಾಭಿವೃದ್ಧಿ ಸಚಿವರು; ಅಲ್ಲಿ ಕೆಲಸ ಮಾಡಲಾರದೇ ಜನರನ್ನು ದಾರಿ ತಪ್ಪಿಸಲು ಈ ರೀತಿ ಅನ್ಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯವರು 40-50 ವರ್ಷ ಈ ರಾಜ್ಯ ಆಳಿಲ್ಲ
ಬಿಜೆಪಿಯವರು 40-50 ವರ್ಷ ಈ ರಾಜ್ಯ ಆಳಿಲ್ಲ; ಅವರೇ 63 ವರ್ಷ ಈ ರಾಜ್ಯವನ್ನು ಆಳಿದ್ದಾರೆ. ಕೆಂಪೇಗೌಡರು 4 ಸ್ತೂಪಗಳನ್ನು ನಿರ್ಮಿಸಿ ಅಲ್ಲಿನವರೆಗೆ ಬೆಂಗಳೂರನ್ನು ವಿಸ್ತರಿಸಲು ಯೋಜಿಸಿದ್ದರು. ಅದಕ್ಕಿಂತ ಹೆಚ್ಚಾದರೆ ಬೆಂಗಳೂರಿಗೆ ಆಪತ್ತಿದೆ ಎಂಬ ಆಶಯ ಅವರಲ್ಲಿತ್ತು. ಈಗ ದೇವನಹಳ್ಳಿ, ಆನೇಕಲ್, ಹೊಸಕೋಟೆ ಬೆಂಗಳೂರೇ ಆಗಿವೆ. ಸ್ವಲ್ಪ ದಿನ ಹೋದರೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಎಲ್ಲ ತಗೊಂಡು ಬಿಡುತ್ತಾರೆ ಎಂದು ಆಕ್ಷೇಪಿಸಿದರು. ಮಾಲಿನ್ಯ, ಸಂಚಾರದ ಒತ್ತಡವನ್ನು ನಾವು ಇವತ್ತೇ ಯೋಚಿಸಬೇಕಿದೆ ಎಂದು ಸಲಹೆ ನೀಡಿದರು.
ಸಂಸದರದ್ದು ದುಡ್ಡು ತರುವ ಕೆಲಸ ಅಲ್ಲ
ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಸಂಸದರದ್ದು ದುಡ್ಡು ತರುವ ಕೆಲಸ ಅಲ್ಲ; ಅವರೇನು ಏಜೆಂಟರೇ? ಅವರು ರಿಯಲ್ ಎಸ್ಟೇಟ್ ಮಾಡುತ್ತಾರಾ? ನೀವು ಮೊದಲು ರಾಜೀನಾಮೆ ಕೊಡಿ; ಆಮೇಲೆ ಅವರು ಹಣ ತರುತ್ತಾರೆ ಎಂದು ಸವಾಲು ಹಾಕಿದರು. ಕುಣಿಯಲಾರದವರಿಗೆ ನೆಲ ಡೊಂಕು ಎಂಬಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು. ಕುಮಾರಸ್ವಾಮಿಯವರು ಅವರಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಗಾಳಿಯಲ್ಲಿ ಗುಂಡು ಹೊಡೆಯುತ್ತ ಕುಳಿತ ನಿಮ್ಮನ್ನು ಈ ರಾಜ್ಯದ ಜನರು ಇನ್ನೂ ಎರಡೂವರೆ ವರ್ಷ ಹೇಗೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಅಭಿವೃದ್ಧಿ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ತೊಲಗಿ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಸಿನೊಳಗೇ ಭಯೋತ್ಪಾದನೆ..
ಹಲವು ತಿಂಗಳಿಂದ ಮಾತೆತ್ತಿದರೆ ಸಂಪುಟ ಪುನಾರಚನೆ ವಿಷಯ ತರುತ್ತಾರೆ. ಗುಜರಾತ್‍ನವರ ಬಳಿ ಪಾಠ ಹೇಳಿಸಿಕೊಂಡು ಬನ್ನಿ. ಬೆಳಿಗ್ಗೆ ರಾಜೀನಾಮೆ ಕೊಟ್ಟರು. ಮರುದಿನ ಹೊಸ ಸರಕಾರವೇ ಬಂತು ಎಂದು ಗಮನ ಸೆಳೆದರು. ಸಚಿವಸಂಪುಟದ ವಿಷಯ ಮುಂದಿಟ್ಟು ಕಾಂಗ್ರೆಸ್ಸಿನೊಳಗೇ ಭಯೋತ್ಪಾದನೆ ನಡೆದಿದೆ ಎಂದು ಆರೋಪಿಸಿದರು.
ಸಾರ್ವಜನಿಕರೇ ಗಮನಿಸಿ : ನವೆಂಬರ್ 1 ರಿಂದ `ಆಧಾರ್ ಕಾರ್ಡ್ ಅಪ್ ಡೇಟ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ








